ತುರ್ತು ಬಳಕೆ ಲಸಿಕಾ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರ್ಪಡೆ ವಿಚಾರ; ಜೂನ್ 23ಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ದಾಖಲೆ ಸಲ್ಲಿಸಲಿದೆ ಭಾರತ್ ಬಯೋಟೆಕ್

| Updated By: ರಶ್ಮಿ ಕಲ್ಲಕಟ್ಟ

Updated on: Jun 17, 2021 | 2:15 PM

Covaxin: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಲಸಿಕೆ ಪಟ್ಟಿಗೆ ಅಗತ್ಯವಾದ 90% ದಾಖಲಾತಿಗಳನ್ನು ಸಲ್ಲಿಸಿತ್ತು. ಉಳಿದ ದಾಖಲೆಗಳನ್ನು ಈ ತಿಂಗಳು ಸಲ್ಲಿಸಲಾಗುವುದು ಎಂದು ಅದು ಹೇಳಿದೆ.

ತುರ್ತು ಬಳಕೆ ಲಸಿಕಾ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರ್ಪಡೆ ವಿಚಾರ; ಜೂನ್ 23ಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ದಾಖಲೆ ಸಲ್ಲಿಸಲಿದೆ ಭಾರತ್ ಬಯೋಟೆಕ್
ಕೊವ್ಯಾಕ್ಸಿನ್
Follow us on

ದೆಹಲಿ: ಜೂನ್ 23 ಕ್ಕೆ ನಿಗದಿಪಡಿಸಲಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ (WHO) ಸಭೆಯಲ್ಲಿ ಕೊವಿಡ್-19 ಲಸಿಕೆ ಕೋವಾಕ್ಸಿನ್ ಅನುಮೋದನೆಗೆ ಸಂಬಂಧಿಸಿದಂತೆ ವ್ಯಾಕ್ಸಿನ್ ಅಧ್ಯಯನದ ಪ್ರಾಥಮಿಕ ವರದಿಯನ್ನು ಭಾರತ್ ಬಯೋಟೆಕ್ ಸಂಸ್ಥೆ ಸಲ್ಲಿಸಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಲಸಿಕೆ ಪಟ್ಟಿಗೆ ಅಗತ್ಯವಾದ 90% ದಾಖಲಾತಿಗಳನ್ನು ಸಲ್ಲಿಸಿತ್ತು. ಉಳಿದ ದಾಖಲೆಗಳನ್ನು ಈ ತಿಂಗಳು ಸಲ್ಲಿಸಲಾಗುವುದು ಎಂದು ಅದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಹೊಂದಿರುವ ಲಸಿಕೆ ಪಡೆದಿರುವವರಿಗೆ ಮಾತ್ರ ದೇಶಗಳು ಪ್ರಯಾಣಕ್ಕೆ ಅನುಮತಿ ನೀಡಬಹುದು ಎಂದು ಊಹಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದ ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ.ಪೌಲ್ ಅವರು ಭಾರತ್ ಬಯೋಟೆಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು.

ನಾವು ಭಾರತ್ ಬಯೋಟೆಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜೊತೆ ಕೆಲಸ ಮಾಡುತ್ತಿದ್ದೇವೆ. ಮಾಹಿತಿ ಹಂಚಿಕೆ ನಡೆಯುತ್ತಿದೆ, ಈ ಮೈಲಿಗಲ್ಲು ಶೀಘ್ರದಲ್ಲೇ ಸಾಧಿಸಬಹುದೆಂದು ನಾವು ಉತ್ಸುಕರಾಗಿದ್ದೇವೆ ಎಂದು ಪೌಲ್ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಕಳೆದ ವಾರ ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಕೊವಾಕ್ಸಿನ್ ನ ತುರ್ತು ಬಳಕೆಯ ಅಧಿಕಾರ (EUA) ಗಾಗಿ ಭಾರತ್ ಬಯೋಟೆಕ್ ಪ್ರಸ್ತಾಪವನ್ನು ತಿರಸ್ಕರಿಸಿದೆ. ಅಮೆರಿಕ ಎಫ್ಡಿಎ ಹೆಚ್ಚುವರಿ ಪ್ರಯೋಗವನ್ನು ಪ್ರಾರಂಭಿಸಲು ಕಂಪನಿಗೆ ಕೇಳಿದೆ, ಇದರಿಂದಾಗಿ ಕಂಪನಿಯು ಬಯೋಲಾಜಿಕ್ಸ್ ಲೈಸೆನ್ಸ್ ಅಪ್ಲಿಕೇಷನ್ (BLA) ಗೆ ಅರ್ಜಿ ಸಲ್ಲಿಸಬಹುದು, ಅಂದರೆ ಪೂರ್ಣ ಅನುಮೋದನೆ. ಇದರ ಬೆನ್ನಲ್ಲೇ, ಕಂಪನಿಯು ಈಗ ಕೊವಾಕ್ಸಿನ್‌ನ ಸಂಪೂರ್ಣ ಅನುಮೋದನೆಯನ್ನು ಪಡೆಯಲಿದೆ ಎಂದು ಭಾರತ್ ಬಯೋಟೆಕ್ ಒಕುಜೆನ್‌ನ ಅಮೆರಿಕ ಪಾಲುದಾರ ಹೇಳಿದ್ದಾರೆ.


ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಯ ಶಿಫಾರಸ್ಸಿನ ಮೇರೆಗೆ, ತನ್ನ ಕೊವಿಡ್ -19 ಲಸಿಕೆ ಅಭ್ಯರ್ಥಿ ಕೋವಾಕ್ಸಿನ್ ಗಾಗಿ ಬಯಾಲಾಜಿಕಲ್ ಪರವಾನಗಿ ಅರ್ಜಿಯನ್ನು (ಬಿಎಲ್ಎ) ಸಲ್ಲಿಸುವುದನ್ನು ಮುಂದುವರಿಸುವುದಾಗಿ ಒಕುಜೆನ್ ಇಂಕ್ ಪ್ರಕಟಿಸಿದೆ. ಕೊವಾಕ್ಸಿನ್ ಗಾಗಿ ಇನ್ನು ಮುಂದೆ ತುರ್ತು ಬಳಕೆ ದೃಢೀಕರಣವನ್ನು (EUA) ಮುಂದುವರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಕಂಪನಿಯು ಈ ಹಿಂದೆ ಸಲ್ಲಿಸಿದ ಮಾಸ್ಟರ್ ಫೈಲ್‌ಗೆ ಸಂಬಂಧಿಸಿದಂತೆ ಎಫ್‌ಡಿಎ ಒಕುಜೆನ್‌ಗೆ ಪ್ರತಿಕ್ರಿಯಿಸಿದ್ದು, ಒಕುಜೆನ್ ತನ್ನ ಲಸಿಕೆ ಅಭ್ಯರ್ಥಿಗೆ ಇಯುಎ ಅರ್ಜಿಯ ಬದಲು ಬಿಎಲ್‌ಎ ಸಲ್ಲಿಕೆಯನ್ನು ಮುಂದುವರಿಸಲು ಶಿಫಾರಸು ಮಾಡಿತು ಮತ್ತು ಹೆಚ್ಚುವರಿ ಮಾಹಿತಿ ಮತ್ತು ಡೇಟಾವನ್ನು ಕೋರಿತು.

ಇದನ್ನೂ ಓದಿ: ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಸಿಲ್ಲ: ಭಾರತ್ ಬಯೋಟೆಕ್ ಸ್ಪಷ್ಟನೆ

(Approval COVID-19 vaccine Covaxin Bharat Biotech’s pre-submission meeting with WHO on 23 June)