ವಾರಣಾಸಿ, ಆಗಸ್ಟ್ 05: 17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ (Gyanvapi mosque) ತನ್ನ ವೈಜ್ಞಾನಿಕ ಸಮೀಕ್ಷೆಯನ್ನು (Scientific Survey) ಇಂದು (ಶನಿವಾರ) ಪುನರಾರಂಭಿಸಿದೆ. ಬೆಳಿಗ್ಗೆ ಕೆಲಸ ಪ್ರಾರಂಭವಾಗಿದ್ದು ಸಂಜೆ 5 ಗಂಟೆಗೆ ಇದು ಮುಗಿಯುತ್ತದೆ ಎಎಸ್‌ಐ ಸಮೀಕ್ಷಾ ತಂಡದೊಂದಿಗೆ ಬಂದಿದ್ದ ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿಯ ಎಎಸ್‌ಐ ಸಮೀಕ್ಷೆಯ ಕುರಿತ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಸಮೀಕ್ಷೆಯ ಸಮಯದಲ್ಲಿ ಯಾವುದೇ ಅಗೆಯುವ ಕೆಲಸ ನಡೆಸದಂತೆ ಎಎಸ್‌ಐಗೆ ಕೇಳಿದೆ.
ಅಗೆಯುವ ಕಾರ್ಯವನ್ನು ಅಗತ್ಯವಿದ್ದರೆ ನಡೆಸಬಹುದು ಎಂದು ವಾರಣಾಸಿ ನ್ಯಾಯಾಲಯ ಹೇಳಿದ್ದನ್ನು ಸುಪ್ರೀಂ ತಳ್ಳಿಹಾಕಿದೆ.
ಜುಲೈ 21 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಆದೇಶಿಸಿದ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ಎಎಸ್‌ಐ ತಂಡವು ಈಗಾಗಲೇ ಪುನರಾರಂಭಿಸಿದ ಕೆಲವೇ ಗಂಟೆಗಳ ನಂತರ ಶುಕ್ರವಾರ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯೂ ಅಲ್ಲ ಹಿಂದೂ ದೇವಾಲಯವೂ ಅಲ್ಲ, ಅದು ಬೌದ್ಧ ಮಠ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್
ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಗುರುವಾರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಇದಾದನಂತರ ಮುಸ್ಲಿಂ ಸಂಘಟನೆಯು ಸುಪ್ರೀಂಕೋರ್ಟ್‌ನ ಮೊರೆ ಹೋಗಿತ್ತು. ಶುಕ್ರವಾರ, ವಾರಣಾಸಿ ನ್ಯಾಯಾಲಯವು ಎಎಸ್‌ಐಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ತಿಂಗಳನ್ನು ನೀಡಿದ್ದು ಈ ಹಿಂದಿನ ಗಡುವನ್ನು ಶುಕ್ರವಾರದಿಂದ ಸೆಪ್ಟೆಂಬರ್ 4 ರವರೆಗೆ ವಿಸ್ತರಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ