ತ್ರಿಪುರಾ: ಹಿಜಾಬ್ ಧರಿಸಿ ಶಾಲೆಗೆ ಪ್ರವೇಶಿಸದಂತೆ ತಡೆದ ಹಿಂದೂ ಯುವಕರು, ಇದನ್ನು ಪ್ರಶ್ನಿಸಿದ ಹುಡುಗನಿಗೆ ಥಳಿತ
ಹಿಂದೂ ಯುವಕರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲೆ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ, ಇದನ್ನು ಪ್ರಶ್ನಿಸಿದ ಅನ್ಯಕೋಮಿನ ಹುಡುಗನನ್ನು ಥಳಿಸಿದ್ದಾರೆ.
ಗುವಾಹಟಿ, ಆ.5: ಹಿಂದೂ ಯುವಕರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲೆ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ, ಇದನ್ನು ಪ್ರಶ್ನಿಸಿದ ಅನ್ಯಕೋಮಿನ ಹುಡುಗನನ್ನು ಥಳಿಸಿರುವ ಘಟನೆ ಶುಕ್ರವಾರ (ಆ.4) ತ್ರಿಪುರಾದಲ್ಲಿ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿಯನ್ನು ಶಾಲೆಯ ಮುಂದೆ ಎಳೆದೊಯ್ದು ಥಳಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಘಟನೆ ಮುಖ್ಯೋಪಾಧ್ಯಾಯರು ಮತ್ತು ಇತರ ಶಿಕ್ಷಕರ ಮುಂದೆಯೇ ನಡೆದಿದ್ದರು ಯಾರು ಕೂಡ ಆ ಹುಡುಗನನ್ನು ಕಾಪಾಡಲು ಬರಲಿಲ್ಲ, ಈ ಘಟನೆಯನ್ನು ವಿರೋಧಿಸಿ ಸ್ಥಳೀಯರು ಶಾಲೆಯ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಈ ಹಿಂದೂ ಯುವಕರು ಹೊರಗಿನವರು, ಅವರಿಗೂ ಶಾಲೆಗೂ ಯಾವುದೇ ಸಂಬಂಧವಿಲ್ಲ ಎಂದು ವರದಿ ತಿಳಿಸಿದೆ. ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಪರಿಸ್ಥಿತಿ ನಿಯಂತ್ರದಲ್ಲಿದ್ದು, ಘಟನೆಯ ನಂತರ ಸೆಪಹಿಜಾಲಾ ಜಿಲ್ಲೆಯ ಬಿಶಾಲ್ಘರ್ದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಸಿಬ್ಬಂದಿಗಳ ಪ್ರಕಾರ, ದಾಳಿ ಮಾಡಿದ ಹಿಂದೂ ಯುವಕರು ಶಾಲೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು, ಈ ಹಿಂದೆ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬಾರದು ಎಂದು ಮುಖ್ಯೋಪಾಧ್ಯಾಯರನ್ನು ಮನವಿ ಮಾಡಿಕೊಂಡಿದ್ದರು. ಬಳಿಕ ಮುಖ್ಯೋಪಾಧ್ಯಾಯರು ಈ ಬಗ್ಗೆ ಒಂದು ಆದೇಶವನ್ನು ನೀಡಿ ಹಿಜಾಬ್ ಧರಿಸಬಾರದು ಎಂದು ಹೇಳಿದ್ದಾರೆ. ಅದರೂ ಕೆಲವು ವಿದ್ಯಾರ್ಥಿನಿಯರು ಸಮಸ್ತ್ರದ ಮೇಲೆ ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ಗೆ ಅವಕಾಶ ನಿರಾಕರಣೆ; ಪರೀಕ್ಷೆ ಬರೆಯಲಿಲ್ಲ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು
ಇಂತಹ ನಿಯಮದ ಬಗ್ಗೆ ಸಂಬಂಧಪಟ್ಟ ಸರಕಾರಿ ಇಲಾಖೆಯಿಂದ ಸ್ಪಷ್ಟ ಸೂಚನೆ ಇಲ್ಲದ ಕಾರಣ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಮೌಖಿಕವಾಗಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವುದರಿಂದ ಇದು ಕೋಮುವಾದ ವಿಷಯವಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಹಿಂದೂ -ಮುಸ್ಲಿಂ ಸಮುದಾಯದ ಜನ ಇರುವುದರಿಂದ ಇಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಶಾಲೆಗೆ ರಜೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ