Hijab Controversy: ಹಿಜಾಬ್ಗೆ ಅವಕಾಶ ನಿರಾಕರಣೆ; ಪರೀಕ್ಷೆ ಬರೆಯಲಿಲ್ಲ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು
ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಮನವಿ ಮಾಡಿದರು.
ಉಡುಪಿ: ರಾಜ್ಯಾದ್ಯಂತ ಇಂದಿನಿಂದ (ಏ್ರಪ್ರಿಲ್ 22) ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ವಿವಾದದ ಕೇಂದ್ರವಾಗಿದ್ದ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನತ್ತ ಎಲ್ಲರ ಗಮನ ನೆಟ್ಟಿದೆ. ವಿದ್ಯಾರ್ಥಿನಿಯರು ಬುರ್ಖಾ ತೊಟ್ಟು ಕಾಲೇಜಿಗೆ ಬರುತ್ತಿದ್ದಾರೆ. ಹಿಜಾಬ್, ಬುರ್ಖಾ ತೆಗೆದಿಡಲು ಕಾಲೇಜು ಆಡಳಿತ ಮಂಡಳಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದೆ. ಉಡುಪಿ ನಗರ ಠಾಣಾ ಪೊಲೀಸರು ಪಿಯು ಕಾಲೇಜಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದು, ಪ್ರಾಂಶುಪಾಲರ ಜೊತೆ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದರು. ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಹೋರಾಟಗಾರ್ತಿ ರೇಷಂ ಆಗಮಿಸಿದರು. ಇತರ ವಿದ್ಯಾರ್ಥಿನಿಯರಂತೆ ಪರೀಕ್ಷೆ ಬರೆಯಲು ಕಾಲೇಜು ಒಳಗೆ ಹೋದರು. ಹಿಜಾಬ್ ಹೋರಾಟದ ಮುಂಚೂಣಿಯಲ್ಲಿದ್ದ ಆಲಿಯಾ ಅಸಾದಿ ಸಹ ಹಾಲ್ ಟಿಕೆಟ್ ಪಡೆದುಕೊಂಡರು. ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಕೋರಿ, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಆರು ವಿದ್ಯಾರ್ಥಿನಿಯರ ಪೈಕಿ ಇಬ್ಬರಿಗೆ ಇಂದು ಪರೀಕ್ಷೆ ಇತ್ತು. ಇವರಿಬ್ಬರೂ ಹಾಲ್ ಟಿಕೆಟ್ ಪಡೆದು, ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದಾರೆ. ಪರೀಕ್ಷೆ ಆರಂಭವಾಗುವ ಮೊದಲು ರಾಜ್ಯ ಸರ್ಕಾರದ ಸುತ್ತೋಲೆಯನ್ನು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಗೋಡೆಗೆ ಅಂಟಿಸಿದರು. ಈ ಸಂಬಂಧ ಒಟ್ಟು 11 ಅಂಶಗಳಿರುವ ಸುತ್ತೋಲೆಯನ್ನು ಸರ್ಕಾರ ಪ್ರಕಟಿಸಿತ್ತು.
ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಮನವಿ ಮಾಡಿದರು. ಪರೀಕ್ಷೆ ಆರಂಭವಾದರೂ ಇವರಿಬ್ಬರೂ ಪ್ರಾಚಾರ್ಯರ ಕಚೇರಿಯಲ್ಲಿಯೇ ಕುಳಿತಿದ್ದು ಚರ್ಚೆ ಮುಂದುವರಿಸಿದರು. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ ನಂತರ ಇವರಿಬ್ಬರೂ ಪರೀಕ್ಷೆ ಬರೆಯದೆ ವಿದ್ಯೋದಯ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಮನೆಗೆ ಮರಳಿದರು. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿ, ಅಟೋ ಹತ್ತಿ ಮನೆಯ ಕಡೆಗೆ ಹೋದರು.
ಉಡುಪಿಯ ಶ್ರೀಕೃಷ್ಣ ಮಠದ ಸಮೀಪವೇ ಇರುವ ವಿದ್ಯೋದಯ ಪಿಯುಸಿ ಕಾಲೇಜಿನ ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಪ್ರವೇಶಿಸಿದರು. ಪರೀಕ್ಷಾ ಕೇಂದ್ರದಲ್ಲಿಯೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಇವರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಲು ಸಿಬ್ಬಂದಿ ಪ್ರಯತ್ನಿಸಿದರು.
ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ ದ್ವೀತಿಯ ಪಿಯು ಪರೀಕ್ಷೆ.. ಮಕ್ಕಳ ಭವಿಷ್ಯಕ್ಕೆ ಈ ಪರೀಕ್ಷೆ ತುಂಬಾ ಮುಖ್ಯ. ಇಂದಿನಿಂದ ಮೇ 18ರವರೆಗೆ ಎಕ್ಸಾಂಗಳು ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಮಾಡಲಾಗಿದೆ. ಹಾಗೇ SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಲ್ಲಿರಲಿದೆ. ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ಅವಕಾಶ ಇಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯವಾಗಿದೆ. ಈಗಾಗ್ಲೇ ಆಯಾ ಕಾಲೇಜುಗಳ ಕಾಲೇಜು ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದ್ದು, ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ರಾಮಚಂದ್ರನ್ ಹೇಳಿದ್ದಾರೆ.
ಈ ಬಾರಿ ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು, ಆರೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.. ಇನ್ನು ಎಕ್ಸಾಂ ಕೇಂದ್ರದ ಸುತ್ತ 144 ಸೆಕ್ಷನ್ ಹಾಕಲಾಗಿದ್ದು, 200 ಮೀಟರ್ ನಿಷೇಧಾಜ್ಞೆ ಜಾರಿಯಾಗಿದೆ. ಪರೀಕ್ಷೆ ಹಾಲ್ ಟಿಕೆಟ್ ತೋರಿಸಿ KSRTC ಹಾಗೂ BMTC ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ನಾಳೆಯ ಪರೀಕ್ಷೆಗೆ ವಿದ್ಯಾರ್ಥಿಗಳು ಸ್ವಲ್ಪ ಟೆನ್ಷನ್ನಲ್ಲೇ ತಯಾರಾಗಿದ್ದಾರೆ.
ಇದನ್ನೂ ಓದಿ: 6 ಜನ ಹಿಜಾಬ್ ಹೋರಾಟಗಾರ್ತಿಯರು ಭಯೋತ್ಪಾದಕರು, ಮುಂದೆ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ಹಾಕಲು ಬಿಡಲ್ಲ -ಯಶ್ ಪಾಲ್ ಸುವರ್ಣ
ಇದನ್ನೂ ಓದಿ: Karnataka 2nd PUC Exam: ಹಿಜಾಬ್ ಧರಿಸಿ ಪಿಯು ಪರೀಕ್ಷೆ ಬರೆಯಲು ಅವಕಾಶ ಇಲ್ಲ: ಬಿಸಿ ನಾಗೇಶ್
Published On - 10:34 am, Fri, 22 April 22