ಭೋಪಾಲ್: ಮಧ್ಯಪ್ರದೇಶದ (Madhya Pradesh) ಮೊರೆನಾ (Morena) ಜಿಲ್ಲೆಯ ಕ್ರೀಡಾಂಗಣವೊಂದರಲ್ಲಿ ದೇಶದ ಸಶಸ್ತ್ರ ಪಡೆಗಳಿಗೆ ನೇಮಕಾತಿಗೆ ಸಿದ್ಧತೆ ನಡೆಸುತ್ತಿರುವ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಘಟನೆಯ ವಿಡಿಯೊಗಳನ್ನು ನೋಡಿದರೆ ಯುವಕರ ಗುಂಪು ಮತ್ತೊಂದು ಗುಂಪನ್ನು ಬೆನ್ನಟ್ಟುವುದನ್ನು ತೋರಿಸುತ್ತವೆ. ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸುತ್ತವೆ, ಉದ್ದವಾದ ಮರದ ಕೋಲುಗಳನ್ನು ಹಿಡಿದು ಅಟ್ಟಾಡಿಸುತ್ತಿರುವುದು ಕಾಣುತ್ತದೆ. ಕೋಲಿನಿಂದ ಇನ್ನೊಬ್ಬರಿಗೆ ಹೊಡೆಯಲು ಪ್ರಯತ್ನಿಸುತ್ತಿರುವಾಗ ಬೀಳುತ್ತಿರುವುದೂ ವಿಡಿಯೊದಲ್ಲಿ ಕಾಣುತ್ತದೆ. ಈ ಘರ್ಷಣೆಯ ಹೊತ್ತಲ್ಲಿ ಗುಂಡಿನ ಚಕಮಕಿಯೂ ವರದಿಯಾಗಿದೆ. ರನ್ನಿಂಗ್ ಟ್ರ್ಯಾಕ್‌ನಲ್ಲಿ ಗುಂಪುಗಳ ನಡುವೆ ಘರ್ಷಣೆಯುಂಟಾಗಿತ್ತು. ಬಳಿಕ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಓಟದ ವಿವಾದದ ನಂತರ ಭೀಮರಾವ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಸೇನಾ ಆಕಾಂಕ್ಷಿಗಳು ಗಾಯಗೊಂಡಿದ್ದಾರೆ. ಈವರೆಗೆ ನಾಲ್ಕಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ದೇಶಾದ್ಯಂತ ಪ್ರತಿಭಟನೆಗಳ ನಡುವೆ ಜೂನ್‌ನಲ್ಲಿ ಪ್ರಾರಂಭಿಸಲಾದ ಅಗ್ನಿಪಥ್ ಮಿಲಿಟರಿ ನೇಮಕಾತಿ ಯೋಜನೆಗೆ ಆಕಾಂಕ್ಷಿಗಳು ತಯಾರಿ ನಡೆಸುತ್ತಿದ್ದರು.
ಕಳೆದ ಜೂನ್ 14ರಂದು ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ 17.5 ವರ್ಷದಿಂದ 21 ವರ್ಷದೊಳಗಿನವರಿಗೆ ಸಶಸ್ತ್ರ ದಳಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳುವುದಾಗಿ ಹೇಳಿತ್ತು. ಈ ಪೈಕಿ ಶೇ 25ರಷ್ಟು ಸಿಬ್ಬಂದಿಗೆ 15 ವರ್ಷಗಳ ಸೇವಾವಧಿ ಸಿಗಲಿದೆ ಎಂದು ಕೇಂದ್ರ ಹೇಳಿತ್ತು. ಈ ಯೋಜನೆ ವಿರೋಧಿಸ ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ನಂತರದ ದಿನಗಳಲ್ಲಿ ಸರ್ಕಾರವು ಗರಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.
Published On - 8:34 pm, Tue, 6 September 22