
ಶ್ರೀನಗರ, ಅಕ್ಟೋಬರ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರ ಪತ್ನಿ ಚೀನಾ ಗುಪ್ತಚರ ಸಂಸ್ಥೆಗಳಿಗೆ ದೇಶದ ಸೂಕ್ಷ್ಮ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡುತ್ತಿದ್ದ ಗಂಭೀರ ಆರೋಪದಡಿ ಭದ್ರತಾ ಸಂಸ್ಥೆಗಳ ಬಲೆಗೆ ಬಿದ್ದಿದ್ದಾರೆ.ಆರೋಪಿ ಮಹಿಳೆಯ ವಿರುದ್ಧ ಜಮ್ಮುವಿನ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ‘ಅಧಿಕೃತ ರಹಸ್ಯ ಕಾಯ್ದೆ’ ಹಾಗೂ ಅಪರಾಧ ಸಂಚಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಮಟ್ಟದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮೂಲತಃ ತೆಲಂಗಾಣ ಮೂಲದವರಾದ ಈ ಮಹಿಳೆ ಉನ್ನತ ಶಿಕ್ಷಣ ಪಡೆದಿದ್ದು, 2023 ರಲ್ಲಿ ವಿಶ್ವಸಂಸ್ಥೆಯಲ್ಲಿ (UN) ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದರು. ಈಗ ಸ್ವತಂತ್ರ ಸಂಶೋಧಕಿಯಾಗಿ ಗುರುತಿಸಿಕೊಂಡಿದ್ದರು. ತನಿಖಾಧಿಕಾರಿಗಳ ಪ್ರಕಾರ, ಮಹಿಳೆ ಸಂಶೋಧನೆಯ ಸೋಗಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ:
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ: ಚೀನಾದ ಹ್ಯಾಂಡ್ಲರ್‌ಗಳು ನೀಡಿದ ನಿರ್ದೇಶನದಂತೆ ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ದತ್ತಾಂಶಗಳನ್ನು ವಿಶ್ಲೇಷಿಸಲು ಈಕೆ ಚಾಟ್ಜಿಪಿಟಿ ಮತ್ತು ಕ್ಲೌಡ್ ನಂತಹ ಪ್ರಮುಖ ಎಐ ಪರಿಕರಗಳನ್ನು ಬಳಸಿಕೊಂಡಿದ್ದಾರೆ.
ಮತ್ತಷ್ಟು ಓದಿ: ಜಮ್ಮು-ಕಾಶ್ಮೀರದ ಶಾಸಕರು, ಸಚಿವರ ವೇತನ ಹೆಚ್ಚಳ, 1.8 ಲಕ್ಷದಿಂದ 3 ಲಕ್ಷ ರೂ.ಗೆ ಏರಿಕೆ, ಸದನದಲ್ಲಿ 5 ಮಸೂದೆ ಮಂಡಿಸಿದ ಒಮರ್ ಅಬ್ದುಲ್ಲಾ
ಜಂಟಿ ಕಾರ್ಯಾಚರಣೆ: ಕೇಂದ್ರ ಗುಪ್ತಚರ ಸಂಸ್ಥೆಗಳು (IB) ನೀಡಿದ ನಿಖರ ಸುಳಿವಿನ ಮೇರೆಗೆ ಜಮ್ಮು ಪೊಲೀಸರು ಅಕ್ಟೋಬರ್ 14 ರಂದು ಜಂಟಿ ಕಾರ್ಯಾಚರಣೆ ನಡೆಸಿದರು. ಪಠಾಣ್‌ಕೋಟ್‌ಗೆ ರೈಲು ಹತ್ತಲು ಸಿದ್ಧತೆ ನಡೆಸುತ್ತಿದ್ದ ವೇಳೆ ಜಮ್ಮು ತಾವಿ ರೈಲ್ವೆ ನಿಲ್ದಾಣದಲ್ಲೇ ಮಹಿಳೆಯನ್ನು ಭದ್ರತಾ ಪಡೆಗಳು ತಡೆದು, ಸಮೀಪದ ಮಿಲಿಟರಿ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಗಿತ್ತು.
ಆಕೆಯ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಡಿಜಿಟಲ್ ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿವರವಾದ ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ವಿದೇಶಿ ಗುಪ್ತಚರ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ವಿದ್ವಾಂಸರು, ಸಂಶೋಧಕರು ಮತ್ತು ಥಿಂಕ್-ಟ್ಯಾಂಕ್‌ಗಳ ಮೂಲಕ ಓಪನ್ ಸೋರ್ಸ್ ಇಂಟೆಲಿಜೆನ್ಸ್ ಹೆಸರಿನಲ್ಲಿ ರಕ್ಷಣಾ ರಹಸ್ಯಗಳನ್ನು ಕದಿಯುವ ತಂತ್ರವನ್ನು ವ್ಯಾಪಕವಾಗಿ ಬಳಸುತ್ತಿವೆ.
ಹಣಕಾಸು ವಹಿವಾಟಿನ ಮೇಲೆ ನಿಗಾ: ಈ ವಿಶ್ಲೇಷಣಾತ್ಮಕ ವರದಿಗಳನ್ನು ಚೀನಾದ ಏಜೆಂಟರಿಗೆ ಕಳುಹಿಸಿದ್ದಕ್ಕಾಗಿ ಮಹಿಳೆಗೆ ವಿದೇಶಿ ಖಾತೆಗಳಿಂದ ಹಣ ಸಂದಾಯವಾಗಿದೆಯೇ ಎಂಬ ಬಗ್ಗೆ ಹಣಕಾಸು ತನಿಖಾ ಸಂಸ್ಥೆಗಳು ಆಕೆಯ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋ ವಾಲೆಟ್‌ಗಳನ್ನು ಜಾಲಾಡುತ್ತಿವೆ.
ಸೇನಾ ಅಧಿಕಾರಿಯ ಪಾತ್ರದ ಪರಿಶೀಲನೆ: ಮಹಿಳೆಯ ಪತಿಯಾಗಿರುವ ಸೇನಾ ಅಧಿಕಾರಿಗೆ ಈ ಚಟುವಟಿಕೆಗಳ ಬಗ್ಗೆ ಮಾಹಿತಿ ಇತ್ತೇ ಅಥವಾ ತಿಳಿಯದೆಯೇ ಅವರ ಮೂಲಕ ಗೌಪ್ಯ ದಾಖಲೆಗಳನ್ನು ಕಲೆಹಾಕಲಾಗಿದೆಯೇ ಎಂಬ ಆಯಾಮದಲ್ಲೂ ಸೇನಾ ಗುಪ್ತಚರ ವಿಭಾಗ ಆಂತರಿಕ ಪರಿಶೀಲನೆ ನಡೆಸುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ