ನವದೆಹಲಿ, ಡಿಸೆಂಬರ್ 21: ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಧಿಕ್ಕರಿಸುತ್ತಿದ್ದಾರೆ. ಇಡಿ ಸಮನ್ಸ್ ಅಕ್ರಮ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿರುವ ಕೇಜ್ರಿವಾಲ್, ಸಮನ್ಸ್ ಹಿಂಪಡೆಯಬೇಕೆಂದು ಜಾರಿ ನಿರ್ದೇಶನಾಲಯವನ್ನು ಒತ್ತಾಯಿಸಿದ್ದಾರೆ. ‘ಹಿಂದಿನಂತೆ ಈ ಸಲದ ಸಮನ್ಸ್ ಕೂಡ ಅಕ್ರಮವಾಗಿದೆ,’ ಎಂದು ದೆಹಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ದೆಹಲಿಯ ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿರುವ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ವಿಚಾರಣೆ ನಡೆಸಲು ಒಂದೆರಡು ಬಾರಿ ಸಮನ್ಸ್ ಕೊಟ್ಟಿದೆ. ಡಿಸೆಂಬರ್ 17ರಂದೂ ಸಮನ್ ಕೊಟ್ಟಿದ್ದು, ಡಿಸೆಂಬರ್ 21ರಂದು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇದನ್ನೂ ಓದಿ: ಸಾಮಾನ್ಯ ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ, ದೀರ್ಘ ಕಾಲದ ಪರಿಣಾಮ ಅನೇಕ: ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ
ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆಯೂ ಇಡಿ ಸಮನ್ಸ್ ಕೊಟ್ಟಿತ್ತು. ಅದೇ ದಿನ ಕೇಜ್ರಿವಾಲ್ ಮಧ್ಯಪ್ರದೇಶ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.
ನನ್ನ ಜೀವನ ಬಹಳ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೂಡಿದೆ. ಮುಚ್ಚಿಟ್ಟುಕೊಳ್ಳುವುದು ಏನೂ ಇಲ್ಲ… ಕಾನೂನಾತ್ಮಕ ಸಮನ್ಸ್ಗಳಿಗೆ ತಾನು ಬದ್ಧನಾಗಿರುತ್ತೇನೆ. ಆದರೆ, ಈ ಸಮನ್ಸ್ಗಳು ಅಕ್ರಮವಾಗಿವೆ. ರಾಜಕೀಯ ಪ್ರೇರಿತವಾಗಿವೆ. ಅವುಗಳನ್ನು ಜಾರಿ ನಿರ್ದೇಶನಾಲಯ ಹಿಂಪಡೆಯಬೇಕು ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಜನರಿಗೆ ಕಾನೂನಿನ ಭಯವಿಲ್ಲ; ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ನಿತಿನ್ ಗಡ್ಕರಿ ಕಳವಳ
ಇಡಿ ಸಮನ್ಸ್ ಪ್ರಕಾರ ಅರವಿಂದ್ ಕೇಜ್ರಿವಾಲ್ ಇವತ್ತು ವಿಚಾರಣೆಗೆ ಹಾಜರಾಗಬೇಕು. ಆದರೆ, ಅವರು ಪಂಜಾಬ್ನಲ್ಲಿ ಪೂರ್ವದಲ್ಲೇ ನಿಗದಿಯಾಗಿದ್ದ ವಿಪಶ್ಶನ ಧ್ಯಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ ಕೇಜ್ರಿವಾಲ್ ಈಗಾಗಲೇ ಪಂಜಾಬ್ಗೆ ತೆರಳಿದ್ದಾರೆನ್ನಲಾಗಿದೆ.
ಅರವಿಂದ್ ಕೇಜ್ರಿವಾಲ್ ಬಹಳ ಕಾಲದಿಂದ ವಿಪಶ್ಶನಾ ಧ್ಯಾನದ ಅಭ್ಯಾಸ ಮಾಡುತ್ತಿದ್ದಾರೆ. ಪ್ರತೀ ವರ್ಷವೂ ಅವರು ಧ್ಯಾನ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ