Wrestling Body Polls: ಭಾರತದ ಕುಸ್ತಿ ಫೆಡರೇಷನ್ ಚುನಾವಣೆ ಇಂದು, ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಸ್ಪರ್ಧೆ
ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದ ಜೊತೆಗೆ ಹಿರಿಯ ಉಪಾಧ್ಯಕ್ಷ, ನಾಲ್ವರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಚುನಾವಣೆ ನಡೆಯಲಿದೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಮಾಜಿ ಕುಸ್ತಿಪಟು ಮೋಹನ್ ಯಾದವ್ ಕೂಡಾ ಇದ್ದಾರೆ.
ದೆಹಲಿ ಡಿಸೆಂಬರ್21: ಭಾರತೀಯ ಕುಸ್ತಿ ಫೆಡರೇಷನ್ (WFI) ಚುನಾವಣೆಗೆ ಇಂದು (ಗುರುವಾರ) ಮತದಾನ ನಡೆಯಲಿದೆ. ಈ ಹಿಂದೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು ಅವರನ್ನು ಆ ಸ್ಥಾನದಿಂದ ಬದಲಿಸಬೇಕು ಎಂಬ ಒತ್ತಾಯದ ಕೂಗು ಎದ್ದಿತ್ತು. ಆದಾಗ್ಯೂ, ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಎಂದು ಹೇಳಲಾದ ಸಂಜಯ್ ಸಿಂಗ್ (Sanjay Singh) ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ (Anita Sheoran) ನಡುವೆ ಪೈಪೋಟಿ ನಡೆಯಲಿದೆ.
ಉನ್ನತ ಹುದ್ದೆಯ ಜೊತೆಗೆ ಹಿರಿಯ ಉಪಾಧ್ಯಕ್ಷ, ನಾಲ್ವರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಚುನಾವಣೆ ನಡೆಯಲಿದೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಲ್ಲಿ ಒಬ್ಬರು ಹೊಸದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಮಾಜಿ ಕುಸ್ತಿಪಟು ಮೋಹನ್ ಯಾದವ್ ಆಗಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಉನ್ನತ ಹುದ್ದೆಯನ್ನು ಅಲಂಕರಿಸಿದ 12 ವರ್ಷಗಳ ನಂತರ ದೇಶದ ಉನ್ನತ ಕುಸ್ತಿ ಸಂಸ್ಥೆಗೆ ಮತದಾನದ ಮೂಲಕ ಹೊಸ ಅಧ್ಯಕ್ಷರ ನೇಮಕ ಆಗಲಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರಿಗೆ ಬ್ರಿಜ್ ಭೂಷಣ್ ಸಿಂಗ್ ಅವರ ಕುಟುಂಬದ ಸದಸ್ಯರು ಅಥವಾ ಸಹಾಯಕರು ಯಾರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಆದ್ದರಿಂದ, ಬ್ರಿಜ್ ಭೂಷಣ್ ಅವರ ಪುತ್ರ ಪ್ರತೀಕ್ ಮತ್ತು ಅಳಿಯ ವಿಶಾಲ್ ಸಿಂಗ್ ರೇಸ್‌ಗೆ ಪ್ರವೇಶಿಸಲಿಲ್ಲ, ಆದರೆ ಅವರ ಸಹಾಯಕ ಸಂಜಯ್ ಸಿಂಗ್ ಅವರ ನಾಮನಿರ್ದೇಶನ ಮಾಡಲಾಗಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್ ಬಗ್ಗೆ ದೆಹಲಿ ಪೊಲೀಸರು ಚಾರ್ಜ್ಶೀಟ್ನಲ್ಲಿ ಹೇಳಿರುವುದೇನು?
WFI ಅಧ್ಯಕ್ಷರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕುಸ್ತಿಪಟುಗಳು ಶೆರಾನ್ ಅವರನ್ನು ಬೆಂಬಲಿಸಿದ್ದಾರೆ.
ಸಂಜಯ್ ಸಿಂಗ್ ಮತ್ತು ಅವರ ಸಹಚರರ ಪ್ರಕಾರ, ಅವರಿಗೆ ಹೆಚ್ಚಿನ ರಾಜ್ಯಗಳ ಕುಸ್ತಿ ಒಕ್ಕೂಟಗಳ ಬೆಂಬಲವಿದೆ ಮತ್ತು ಗೆಲುವಿನ ವಿಶ್ವಾಸವಿದೆ. ಎನ್‌ಡಿಟಿವಿ ಜತೆ ಮಾತನಾಡಿದ ಸಿಂಗ್, ಕ್ರೀಡೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ಯಾರು ಎಂಬುದನ್ನು ಕುಸ್ತಿ ಪಟುಗಳು ತಿಳಿದುಕೊಂಡು ಮತ ಚಲಾಯಿಸುವಾಗ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನನಗೆ ಗೆಲುವಿನ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಯಾದವ್ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, “ಕುಸ್ತಿಪಟು ರಾಜ್ಯದ ಮುಖ್ಯಮಂತ್ರಿಯಾಗಿರುವುದು ದೊಡ್ಡ ಸಂದೇಶವಾಗಿದೆ. ಅವರು ಇಲ್ಲಿಯೂ ಗೆಲ್ಲುತ್ತಾರೆ ಎಂಬುದು ನನಗೆ ಖಚಿತವಾಗಿದೆ” ಎಂದು ಸಿಂಗ್ ಹೇಳಿದ್ದಾರೆ
WFI ಚುನಾವಣೆಯ ಪ್ರಕ್ರಿಯೆಯು ಜುಲೈನಲ್ಲಿ ಪ್ರಾರಂಭವಾಯಿತು, ಆದರೆ ನ್ಯಾಯಾಲಯದ ಪ್ರಕರಣಗಳು ಅದನ್ನು ವಿಳಂಬಗೊಳಿಸುತ್ತಲೇ ಇದ್ದವು. ಇದು ಅಂತರಾಷ್ಟ್ರೀಯ ಕುಸ್ತಿ ಸಂಸ್ಥೆಯು WFI ಅನ್ನು ಅಮಾನತುಗೊಳಿಸಿತು. ಇತ್ತೀಚೆಗಷ್ಟೇ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಚುನಾವಣೆಗೆ ಕಟ್ಟೆಚ್ಚರ ವಹಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Thu, 21 December 23