Kannada News National Ashok Gehlot asks Rajasthan MLAs to be present in Delhi if he files nomination for Congress President polls
ರಾಹುಲ್ ಗಾಂಧಿ ಮನವೊಲಿಕೆಗೆ ಪ್ರಯತ್ನಿಸುವೆ; ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ಶಾಸಕರೊಂದಿಗೆ ಅಶೋಕ್ ಗೆಹ್ಲೋಟ್ ಚರ್ಚೆ
Congress President Election: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ರಾಹುಲ್ ಗಾಂಧಿಯನ್ನು ಕೊನೆಯ ಬಾರಿಗೆ ಮನವೊಲಿಸಲು ಪ್ರಯತ್ನಿಸುವುದಾಗಿ ಅಶೋಕ್ ಗೆಹ್ಲೋಟ್ ಶಾಸಕರಿಗೆ ತಿಳಿಸಿದ್ದಾರೆ.
ಅಶೋಕ್ ಗೆಹ್ಲೋಟ್
Follow us on
ಜೈಪುರ: ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ಮುಂಚೂಣಿಯಲ್ಲಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನಿನ್ನೆ (ಮಂಗಳವಾರ) ರಾತ್ರಿ ತಮ್ಮ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. 71 ವರ್ಷದ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ನಾನು ನಿಮ್ಮಿಂದ ದೂರವಿರುವುದಿಲ್ಲ ಎಂದು ಅವರು ಶಾಸಕರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ತಡರಾತ್ರಿಯ ಸಭೆಯಲ್ಲಿ ಅಶೋಕ್ ಗೆಹ್ಲೋಟ್ ಅವರು ಮೊದಲು ಕೇರಳಕ್ಕೆ ಹೋಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವಂತೆ ರಾಹುಲ್ ಗಾಂಧಿಯನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
ನಾನು ಎಲ್ಲಿಗೆ ಹೋದರೂ ರಾಜಸ್ಥಾನಕ್ಕೆ ಸೇವೆ ಸಲ್ಲಿಸುತ್ತಲೇ ಇರುತ್ತೇನೆ. ನಾನು ಎಲ್ಲಿಗೂ ಹೋಗುವುದಿಲ್ಲ, ಚಿಂತಿಸಬೇಡಿ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಈ ಹಂತದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವ ಯಾವುದೇ ಆಲೋಚನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಅಶೋಕ್ ಗೆಹ್ಲೋಟ್ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬೆಂಬಲವನ್ನು ಪಡೆಯಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಂದು ಸಂಜೆ ತೆರಳಲಿದ್ದಾರೆ.
ಅಶೋಕ್ ಗೆಹ್ಲೋಟ್ ಇಂದು ತನ್ನ ಪ್ರವಾಸವನ್ನು ಪ್ರಾರಂಭಿಸುತ್ತಿದ್ದಂತೆ, ಅವರು ದೆಹಲಿ, ಕೇರಳ ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ದೆಹಲಿಯಲ್ಲಿ ಸೆಪ್ಟೆಂಬರ್ 25 ಮತ್ತು 28ರ ನಡುವೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ಅಶೋಕ್ ಗೆಹ್ಲೋಟ್ ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ರಾಹುಲ್ ಗಾಂಧಿಯನ್ನು ಕೊನೆಯ ಬಾರಿಗೆ ಮನವೊಲಿಸಲು ಪ್ರಯತ್ನಿಸುವುದಾಗಿ ಅಶೋಕ್ ಗೆಹ್ಲೋಟ್ ಶಾಸಕರಿಗೆ ತಿಳಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ನಂತರ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ನಂತರ ಮತ್ತೆ ಅಧ್ಯಕ್ಷ ಸ್ಥಾನಕ್ಕೇರಲು ನಿರಾಕರಿಸಿದ್ದರು.
ತಾವು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಎಲ್ಲರೂ ದೆಹಲಿಗೆ ಬರಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಶಾಸಕರಿಗೆ ಹೇಳಿದ್ದಾರೆ. ನಾನು ಪಕ್ಷದ ಆಜ್ಞೆಯನ್ನು ಮಾಡುತ್ತೇನೆ ಮತ್ತು ನಾನು ಪಕ್ಷದ ನಿಷ್ಠಾವಂತ ಸೈನಿಕ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತವನ್ನು ಘೋಷಿಸಿದ್ದಾರೆ. ಅಲ್ಲದೆ, ಅವರು ಸೋನಿಯಾ ಗಾಂಧಿಯವರಿಂದ ಅನುಮತಿ ಪಡೆದಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ಗಾಂಧಿ ಕುಟುಂಬದ ನಿಷ್ಠಾವಂತ ನಿಷ್ಠರಾಗಿದ್ದರೆ ಶಶಿ ತರೂರ್ 2020ರಲ್ಲಿ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ಒತ್ತಾಯಿಸಿದ 23 ಹಿರಿಯ ಪಕ್ಷದ ನಾಯಕರ ಭಾಗವಾಗಿದ್ದರು.
ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಪರವಾಗಿ ನಿರ್ಣಯವನ್ನು ಅಂಗೀಕರಿಸುವಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಹರಿಯಾಣ, ಜಾರ್ಖಂಡ್, ಛತ್ತೀಸ್ಗಢ, ಗುಜರಾತ್, ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಜಮ್ಮು ಕಾಶ್ಮೀರದ ಕಾಂಗ್ರೆಸ್ ಘಟಕಗಳು ಇದೇ ರೀತಿಯ ನಿರ್ಣಯಗಳನ್ನು ಅಂಗೀಕರಿಸಿವೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 30ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಅಕ್ಟೋಬರ್ 17ರಂದು ಚುನಾವಣೆ ನಿಗದಿಯಾಗಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಪ್ರಕಟವಾಗಲಿದೆ.