FM Nirmala Sitharaman: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಭಾರತ್ ವಿದ್ಯಾ ಇ-ಕಲಿಕೆ ವೇದಿಕೆಗೆ ಚಾಲನೆ

Bharat Vidya: ವೇದವಿದ್ಯೆ, ಭಾರತೀಯ ದರ್ಶನಶಾಸ್ತ್ರ, ಸಂಸ್ಕೃತ ಕಲಿಕೆ, ಮಹಾಭಾರತದ 18 ಪರ್ವಗಳು, ಪುರಾತತ್ವಶಾಸ್ತ್ರದ ಮೂಲಭೂತ ಅಂಶಗಳು, ಕಾಳಿದಾಸ ಮತ್ತು ಭಾಷೆ ಎಂಬ ಆರು ಕೋರ್ಸ್​ಗಳನ್ನು ಆರಂಭದಲ್ಲಿ ಘೋಷಿಸಲಾಗಿದೆ.

FM Nirmala Sitharaman: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಭಾರತ್ ವಿದ್ಯಾ ಇ-ಕಲಿಕೆ ವೇದಿಕೆಗೆ ಚಾಲನೆ
ಭಂಡಾರ್​ಕರ್ ರಿಸರ್ಚ್​ ಇನ್​ಸ್ಟಿಟ್ಯೂಟ್ ಮತ್ತು ನಿರ್ಮಲಾ ಸೀತಾರಾಮನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 21, 2022 | 6:54 AM

ಪುಣೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ ಪುಣೆಯಲ್ಲಿ ಪೌರ್ವಾತ್ಯ ಮತ್ತು ದಕ್ಷಿಣ ಏಷ್ಯಾದ ಜ್ಞಾನಶಿಸ್ತುಗಳ ಅಧ್ಯಯನಕ್ಕಾಗಿ ಮೀಸಲಾಗಿರುವ ಆನ್​ಲೈನ್ ಕಲಿಕಾ ವೇದಿಕೆ ‘ಭಾರತ್ ವಿದ್ಯಾ’ಕ್ಕೆ ಚಾಲನೆ ನೀಡಲಿದ್ದಾರೆ. ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್​ಸ್ಟಿಟ್ಯೂಟ್ (Bhandarkar Oriental Research Institute – BORI) ರೂಪಿಸಿ, ಅಭಿವೃದ್ಧಿಪಡಿಸಿರುವ ಭಾರತ್ ವಿದ್ಯಾ ವೇದಿಕೆಯು ಕಲೆ, ವಾಸ್ತುಶಿಲ್ಪ, ತತ್ವಶಾಸ್ತ್ರ, ಭಾಷೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಇಂಡಾಲಜಿಯ ವಿವಿಧ ಅಂಶಗಳನ್ನು ಒಳಗೊಂಡ ಉಚಿತ ಮತ್ತು ಪಾವತಿಸಿದ ಕೋರ್ಸ್​ಗಳನ್ನು ಒದಗಿಸುತ್ತದೆ.

ವೇದವಿದ್ಯೆ, ಭಾರತೀಯ ದರ್ಶನಶಾಸ್ತ್ರ, ಸಂಸ್ಕೃತ ಕಲಿಕೆ, ಮಹಾಭಾರತದ 18 ಪರ್ವಗಳು, ಪುರಾತತ್ವಶಾಸ್ತ್ರದ ಮೂಲಭೂತ ಅಂಶಗಳು, ಕಾಳಿದಾಸ ಮತ್ತು ಭಾಷೆ ಎಂಬ ಆರು ಕೋರ್ಸ್​ಗಳನ್ನು ಆರಂಭದಲ್ಲಿ ಘೋಷಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (National Education Policy – NEP) 2020ರ ಅನ್ವಯ ಹಲವು ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೋರ್ಸ್​ಗಳನ್ನು ವಿನ್ಯಾಸಗೊಳಿಸಲು ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ತನ್ನ ಕೆಲವು ಕೋರ್ಸ್​ಗಳಿಗೆ ಮಾನ್ಯತೆ ದೊರಕಿಸಿಕೊಡಲು ಕೆಲವು ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗವನ್ನು ಹೊಂದಿದೆ.

ಪುಣೆ ಮೂಲದ ಭಂಡಾರ್ಕರ್ ಇನ್​ಸ್ಟಿಟ್ಯೂಟ್ ಇಂಡಾಲಜಿ ಅಭ್ಯಾಸಕ್ಕಾಗಿ ಆನ್​ಲೈನ್ ಕಲಿಕಾ ವೇದಿಕೆ ಆರಂಭಿಸಲು ಭಾರತೀಯ ಭಾಷೆಗಳು, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತತ್ವಶಾಸ್ತ್ರದ ಕೋರ್ಸ್​ಗಳನ್ನು ನೀಡಲು ಹಿಂದಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಭಾರತ ಮತ್ತು ದಕ್ಷಿಣ ಏಷ್ಯಾದ ಪ್ರಾಚೀನ ಜ್ಞಾನಶಿಸ್ತುಗಳ ಅಭ್ಯಾಸಕ್ಕೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ರೂಪುಗೊಂಡಿರುವ ಮೊದಲ ಕಲಿಕಾ ವೇದಿಕೆ ಭಾರತ್ ವಿದ್ಯಾ. ತಮ್ಮ ಇಷ್ಟದ ವಿಷಯವನ್ನು ಕಲಿಯುವವರಿಗೆ ತಮ್ಮದೇ ಆದ ವೇಗದಲ್ಲಿ ಕೋರ್ಸ್​ಗಳನ್ನು ಪೂರ್ಣಗೊಳಿಸಲು ಈ ಡಿಜಿಟಲ್ ವೇದಿಕೆಯು ಸಹಾಯ ಮಾಡುತ್ತದೆ.

1917ರಲ್ಲಿ ಸ್ಥಾಪನೆಯಾದ ಭಂಡಾರ್​ಕರ್ ಇನ್​ಸ್ಟಿಟ್ಯೂಟ್ ಅಪರೂಪದ ಪುಸ್ತಕಗಳು ಮತ್ತು ಹಸ್ತಪ್ರತಿಗಳ ಅತಿದೊಡ್ಡ ಸಂಗ್ರಹ ಹೊಂದಿದೆ. ಸಂಸ್ಥೆಯ ಗ್ರಂಥಾಲಯದಲ್ಲಿ 1.25 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮತ್ತು 90 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ 28,000 ಕ್ಕೂ ಹೆಚ್ಚು ಹಸ್ತಪ್ರತಿಗಳಿವೆ. ಓರಿಯೆಂಟಾಲಜಿಯ ಎಲ್ಲಾ ಪ್ರಮುಖ ಅಂಶಗಳ ಬಗ್ಗೆ ಪುಸ್ತಕಗಳು ಇಲ್ಲಿ ಲಭ್ಯವಿವೆ, ಬಹುತೇಕ ಪುಸ್ತಕಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಸಂಸ್ಕೃತ, ಪ್ರಾಕೃತ, ಭಾರತೀಯ ಪ್ರಾದೇಶಿಕ ಭಾಷೆಗಳು, ಆಸಿಯಾನ್ ಮತ್ತು ಯುರೋಪಿಯನ್ ಭಾಷೆಗಳ ಪುಸ್ತಕಗಳು ಭಂಡಾರ್​ಕರ್ ಇನ್​ಸ್ಟಿಟ್ಯೂಟ್​ನಲ್ಲಿವೆ.

ಈ ವರ್ಷದ ಡಿಸೆಂಬರ್ ವೇಳೆಗೆ 100 ಗಂಟೆಗಳಷ್ಟು ಅವಧಿಯ ಕಂಟೆಂಟ್ ಸಿದ್ಧಪಡಿಸಲು ಮತ್ತು ಮುಂದಿನ ವರ್ಷದಲ್ಲಿ ಅದನ್ನು 500 ಗಂಟೆಗಳಿಗೆ ವಿಸ್ತರಿಸಲು ಉದ್ದೇಶಿಸಿದ್ದೇವೆ ಎಂಬ ಭಂಡಾರ್​ಕರ್ ಇನ್​ಸ್ಟಿಟ್ಯೂಟ್​ನ ಕಾರ್ಯನಿರ್ವಾಹಕ ಅಧ್ಯಕ್ಷ ಭೂಪಾಲ್ ಪಟವರ್ಧನ್ ಅವರ ಹೇಳಿಕೆಯನ್ನು ‘ಇಂಡಿಯನ್ ಎಕ್ಸ್​ಪ್ರೆಸ್’ ದಿನಪತ್ರಿಕೆಯು ವರದಿ ಮಾಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗ ವ್ಯಾಪಿಸಿದ ನಂತರದ ದಿನಗಳಲ್ಲಿ ಭಂಡಾರ್​ಕರ್ ಇನ್​ಸ್ಟಿಟ್ಯೂಟ್ ಸುಮಾರು 12 ಅನ್​ಲೈನ್​ ಕೋರ್ಸ್​ ನಡೆಸುತ್ತಿದೆ. ಈ ಪೈಕಿ ಮಹಾಭಾರತ ಮತ್ತು ಮರಾಠಾ ಇತಿಹಾಸದ ಕೋರ್ಸ್​ಗಳು ಅತ್ಯಂತ ಜನಪ್ರಿಯವಾಗಿದ್ದವು. ಕಳೆದ ಎರಡು ವರ್ಷಗಳಲ್ಲಿ ತಲಾ 300 ಸ್ಪರ್ಧಿಗಳ ಐದು ಬ್ಯಾಚ್​ಗಳ ಮೂಲಕ ಮಹಾಭಾರತ ಕೋರ್ಸ್​ ನೀಡಲಾಯಿತು.

‘ಕೋರ್ಸ್ ಅನ್ನು ನೇರಪ್ರಸಾರ ಮಾಡುವ ಸಮಯದಲ್ಲಿ ಝೂಮ್ ಅಥವಾ ಅದೇ ರೀತಿಯ ಪ್ಲಾಟ್​ಫಾರ್ಮ್​ಗಳಲ್ಲಿ ಕಲಿಯುವವರು ಉಪಸ್ಥಿತರಿರಬೇಕು ಎಂದು ನಿರೀಕ್ಷಿಸಲಾಗಿತ್ತು. ಇತರ ಸಮಯ ವಲಯಗಳಲ್ಲಿ ವಾಸಿಸುವ ಸ್ಪರ್ಧಿಗಳಿಗೆ ಇದು ಸವಾಲಾಗಿತ್ತು. ಈ ಸಮಸ್ಯೆ ಪರಿಹರಿಸಲು ನಾವು ಕೋರ್ಸ್​ ಮೆಟೀರಿಯಲ್ ಡೌನ್​ಲೋಡ್​ ಮಾಡಲು ಅವಕಾಶ ಮಾಡಿಕೊಟ್ಟೆವು’ ಎಂದು ತಿಳಿಸಿದರು.

Published On - 6:54 am, Wed, 21 September 22