Bangalore Stampede: ಬೆಂಗಳೂರು ಕಾಲ್ತುಳಿತದಲ್ಲಿ ಮೃತಪಟ್ಟವರು ಯಾರೆಲ್ಲ? ಇಲ್ಲಿದೆ ಪೂರ್ಣ ವಿವರ
ಬರೋಬ್ಬರಿ 18 ವರ್ಷಗಳ ಐಪಿಎಲ್ ಕಾಯುವಿಕೆ ಅಂತ್ಯವಾಗಿತ್ತು. ರಜತ್ ಪಟಿದಾರ್ ನೇತೃತ್ವದ ಆರ್ಸಿಬಿ ಐಪಿಎಲ್ ಕಪ್ ಎತ್ತಿ ಹಿಡಿಯುತ್ತಿದ್ದಂತೆಯೇ ಇಡೀ ಕರುನಾಡು ಸಂಭ್ರಮಿಸಿತ್ತು. ಆದರೆ ಆ ಸಂಭ್ರಮ ಒಂದೇ ದಿನದಲ್ಲಿ ಅಂತ್ಯವಾಗಿದೆ. ಸಂಭ್ರಮಾಚರಣೆ ವೇಳೆ ಆಗಿರುವ ಕಾಲ್ತುಳಿದ ದುರಂತ 11 ಅಭಿಮಾನಿಗಳ ಬಲಿ ಪಡೆದಿದೆ. ಘಟನೆಯಲ್ಲಿ ಮೃತಪಟ್ಟವರು ಯಾರೆಲ್ಲ ಎಂಬ ವಿವರ ಇಲ್ಲಿದೆ.

ಬೆಂಗಳೂರು, ಜೂನ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL) ಟ್ರೋಪಿ ಎತ್ತಿ ಹಿಡಿದ 18 ವರ್ಷಗಳ ಕಾಯುವಿಕೆಯ ನಂತರದ ಸಂಭ್ರಮ 18 ಗಂಟೆಯೂ ಇರಲಿಲ್ಲ. ಎರಡು ದಶಕದ ಬಳಿಕದ ಸಂಭ್ರಮಾಚರಣೆ ಎರಡು ದಿನವೂ ಇರಲಿಲ್ಲ. ಐಪಿಎಲ್ ಸಾಮ್ರಾಜ್ಯ ಗೆದ್ದು ಬಂದ ಕಲಿಗಳನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಲ್ಲಿಸಿ ಸರ್ಕಾರದ ಪ್ರತಿನಿಧಿಗಳು ಹೂವಿನ ಹಾರಹಾಕುತ್ತಿದ್ದರೆ, ಅಲ್ಲಿಂದ ಕೂಗಳತೆ ದೂರದಲ್ಲೇ ಇರುವ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಕಾಲ್ತುಳಿತದಿಂದಾಗಿ (Bangalore Stampede) ಆರ್ಸಿಬಿ ಅಭಿಮಾನಿಗಳ ಮಾರಣಹೋಮವೇ ಆಗಿದೆ.
ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ಆರ್ಸಿಬಿ ತಂಡ ಬುಧವಾರ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿತ್ತು. ತಂಡದ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಸರ್ಕಾರದ ಸನ್ಮಾನ ಆದ ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ಚಿನ್ನಸ್ವಾಮಿ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಇತ್ತು. ಹೀಗಾಗಿ ಬೆಳಗಿನಿಂದಲೇ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಹೀಗೆ ಬಂದವರು ಸ್ಟೇಡಿಯಂಗೆ ಪ್ರವೇಶಿಸುವಾಗ ನೂಕುನುಗ್ಗಲು ಆಗಿದ್ದು, 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ
- ಭೂಮಿಕ್, 20 ವರ್ಷ (ನೆಲಮಂಗಲ)
- ಸಹನ 19 ವರ್ಷ (ಕೋಲಾರ)
- ಪೂರ್ಣಚಂದ್, 32 ವರ್ಷ (ಮಂಡ್ಯ)
- ಚಿನ್ಮಯಿ, 19 ವರ್ಷ
- ದಿವ್ಯಾಂಶಿ, 13 ವರ್ಷ
- ಶ್ರವಣ್, 20 ವರ್ಷ (ಚಿಕ್ಕಬಳ್ಳಾಪುರ)
- ದೇವಿ, 29 ವರ್ಷ
- ಶಿವಲಿಂಗ್, 17 ವರ್ಷ
- ಮನೋಜ್, 33 ವರ್ಷ (ತುಮಕೂರು)
- ಅಕ್ಷತಾ, (ಮಂಗಳೂರು)
- ಹೆಸರು ಪತ್ತೆಯಾಗಿಲ್ಲ, 20 ವರ್ಷ ವೈದೇಹಿ ಆಸ್ಪತ್ರೆ
ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ಗಾಯಾಳುಗಳನ್ನು ಅಕ್ಕಪಕ್ಕಪಕ್ಕದ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅಭಿಮಾನಿಗಳ ಸಾಗರ ಎಷ್ಟಿತ್ತು ಅಂದರೆ, ಆ್ಯಂಬುಲೆನ್ಸ್ಗಳು ಹೋಗಲೂ ದಾರಿ ಇರಲಿಲ್ಲ. ಈ ನಡುವೆ ಹಲವರನ್ನು ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: KSCA ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ: ಸಿಎಂ ಪರೋಕ್ಷ ಹೇಳಿಕೆ
ಮೃತರ ಪೈಕಿ ಶ್ರವಣ್, ಭೂಮಿಕ್, ಮನೋಜ್, ಚಿನ್ಮಯಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯರಾತ್ರಿಯೇ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಮೊಟಕು
ವಿಧಾನಸೌಧದ ಸಮಾರಂಭ ಮುಗಿಯುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ದುರವಂತವೇ ನಡೆದು ಹೋಗಿದ್ದರಿಂದ ಸಂಭ್ರಮ ಮಾಯವಾಗಿತ್ತು. ಕೇವಲ 15 ನಿಮಿಷಳಲ್ಲೇ ಕಾರ್ಯಕ್ರಮ ಮುಗಿಸಲು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದರು.
18 ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿದ್ದರಿಂದ ಇಡೀ ಕರುನಾಡು ಸಂಭ್ರಮದಲ್ಲಿ ತೇಲಾಡಿದ್ದರೆ, ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿದಿಂದಾದ ಸಾವುಗಳು ರಾಜ್ಯದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 am, Thu, 5 June 25








