ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಎದುರು ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮಂಡ್ಯದ ಮುಸ್ಕಾನ್ಳನ್ನು ಅಲ್ ಖೈದಾ (Al-Qaeda) ಉಗ್ರ ಸಂಘಟನೆ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ಹೊಗಳಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೆ ಈ ಬಗ್ಗೆ ಚರ್ಚೆ ಶುರುವಾಗಿದೆ. ಮುಸ್ಕಾನ್ ತಂದೆಯಂತೂ ನಮಗೆ ಆ ಜವಾಹಿರಿ ಯಾರೆಂದೇ ಗೊತ್ತಿಲ್ಲ. ನಮಗಿದೆಲ್ಲ ತಲೆನೋವು ಬೇಡವೇ ಬೇಡ ಎಂದುಬಿಟ್ಟಿದ್ದಾರೆ. ಆದರೂ ಮಂಡ್ಯದ ಮುಸ್ಕಾನ್ಗೆ ಅಲ್ಖೈದಾ ಮುಖ್ಯಸ್ಥ ಪ್ರತಿಕ್ರಿಯೆ ಕೊಟ್ಟಿದ್ದು ಈಗ ರಾಷ್ಟ್ರಮಟ್ಟದಲ್ಲಿ ಮತ್ತೆ ಚರ್ಚೆಗೆ ಕಾರಣವಾಗುತ್ತಿದೆ. ಹಾಗೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಕೂಡ ಈ ಬಗ್ಗೆ ಮಾತನಾಡಿದ್ದು, ಅಲ್ಖೈದಾ ಉಗ್ರರಿಗಂತೂ ಈ ಸಮವಸ್ತ್ರದ ಮಹತ್ವವೆಲ್ಲ ಅರ್ಥವಾಗುವುದಿಲ್ಲ. ಆದರೆ ಭಾರತೀಯ ಮುಸ್ಲಿಮರು ಸಮವಸ್ತ್ರದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತ ವಸ್ತ್ರಗಳನ್ನು ನಿರ್ಬಂಧಿಸದೆ ಇದ್ದರೆ, ಆ ಸಂಸ್ಥೆಗಳೆಲ್ಲ ಧಾರ್ಮಿಕ ಆಚರಣೆ ಮಾಡುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ನೀಡಿರುವ ತೀರ್ಪಿಗೆ ಬೆಂಬಲ ಸೂಚಿಸಿದ್ದಾರೆ.
ಶಾಲೆ-ಕಾಲೇಜುಗಳಿಗೆ ಎಲ್ಲ ಧರ್ಮದವರೂ ಹೋಗುತ್ತಾರೆ. ಅಲ್ಲಿ ಒಬ್ಬರು ಹಿಜಾಬ್ ಧರಿಸಿದರೆ, ಇನ್ನೊಂದು ಧರ್ಮದವರು ತಮ್ಮ ಧಾರ್ಮಿಕ ಸಂಕೇತವನ್ನು ಧರಿಸಿ ಬರುತ್ತಾರೆ. ಹೀಗೆ ಆದರೆ ಶಾಲೆ-ಕಾಲೇಜುಗಳು ಧಾರ್ಮಿಕ ಆಚರಣೆಗಳನ್ನು ಆಚರಿಸುವ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತವೆ. ಯಾರಲ್ಲೂ ಬೇಧ-ಭಾವ ಮೂಡಬಾರದು ಎಂಬ ಕಾರಣಕ್ಕೆ ಸಮವಸ್ತ್ರ ನಿಗದಿಪಡಿಸಲಾಗುತ್ತದೆ. ಅದರ ಮೇಲೆ ಕೂಡ ಹೀಗೆ ಹಿಜಾಬ್, ಮತ್ತೊಂದು ಧರಿಸಿದರೆ ಅಲ್ಲಿ ಸಮಾನತೆಗೆ ಏನು ಅರ್ಥ ಬಂದಂತಾಯಿತು ಎಂದು ಸಿಎಂ ಪ್ರಶ್ನಿಸಿದ್ದಾರೆ.
ಅಲ್ ಖೈದಾ ಸಂಘಟನೆಯ ಸಿಬ್ಬಂದಿಗೆ ಇದೆಲ್ಲ ಅರ್ಥವಾಗುವಂಥದ್ದಲ್ಲ. ಆದರೆ ಭಾರತೀಯ ಮುಸ್ಲಿಮರು ಇದನ್ನು ಅರಿತುಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ನಿಯಮ ಪಾಲನೆ ಮಾಡಿದರೆ ಸಾಕು. ಅಲ್ಲಿಂದ ಮನೆಗೆ ಬಂದ ತಕ್ಷಣ ನಿಮಗೇನು ಇಷ್ಟವೋ ಅದನ್ನು ಧರಿಸಬಹುದಲ್ಲ. ಭಾರತೀಯ ಮುಸ್ಲಿಮರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಆಶಯ ನನ್ನದು ಎಂದೂ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅಂದಹಾಗೇ, ಜವಾಹಿರಿ ಸುಮಾರು 8.43 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ಮುಸ್ಕಾನ್ರನ್ನು ಸಿಕ್ಕಾಪಟೆ ಹೊಗಳಿದ್ದಾನೆ. ಈತನೊಬ್ಬ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಮುಸ್ಕಾನ್ಗೆ ಅಲ್ಲಾಹು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.
ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಶಹಬಾಸ್ ಎಂದ ಅಲ್ ಖೈದಾ ನಾಯಕನನ್ನು ಎಲ್ರೂ ತರಾಟೆಗೆ ತೆಗೆದುಕೊಂಡಿರುವಾಗ ಸಿದ್ದರಾಮಯ್ಯ ಏನಂದರು ನೋಡಿ!?
Published On - 9:55 am, Thu, 7 April 22