ಅಸ್ಸಾಂನಲ್ಲಿ 2 ಮಕ್ಕಳ ನೀತಿ ಇನ್ಮುಂದೆ ಸರ್ಕಾರಿ ಯೋಜನೆಗಳಿಗೂ ಅನ್ವಯ; ಇಬ್ಬರಿಗಿಂತ ಜಾಸ್ತಿ ಮಕ್ಕಳಿದ್ದರೆ ಸೌಕರ್ಯವಿಲ್ಲ
ಅಸ್ಸಾಂಗೆ ವಲಸೆ ಬಂದ ಮುಸ್ಲಿಂ ಕುಟುಂಬಗಳು ಕುಟುಂಬ ಯೋಜನೆ ನಿಯಮಗಳನ್ನು ಅಳವಡಿಸಿಕೊಂಡರೆ ಇಲ್ಲಿರುವ ಅದೆಷ್ಟೋ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಈ ತಿಂಗಳ ಪ್ರಾರಂಭದಲ್ಲಿ ಹೇಳಿಕೆ ನೀಡಿದ್ದ ಹಿಮಂತ್ ಬಿಸ್ವಾ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಅಸ್ಸಾಂ ಸರ್ಕಾರ 2017ರಲ್ಲಿ ಒಂದು ಪ್ರಮುಖ ಕಾನೂನನ್ನು ತಂದಿದೆ. ಅದರ ಅನ್ವಯ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದವರು ರಾಜ್ಯದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರೂ ಅಲ್ಲ ಎಂದು ಹೇಳಿತ್ತು. ಅವತ್ತಿನಿಂದಲೂ ಎರಡಕ್ಕಿಂತಲೂ ಜಾಸ್ತಿ ಮಕ್ಕಳಿರುವವರಿಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ ಮತ್ತು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ. ಆದರೀಗ ಇದೇ ನಿಯಮವನ್ನು ಅಸ್ಸಾಂ ಸರ್ಕಾರ ಮತ್ತಷ್ಟು ವಿಸ್ತರಿಸಿದೆ. ಎರಡಕ್ಕಿಂತ ಜಾಸ್ತಿ ಮಕ್ಕಳನ್ನು ಹೊಂದಿರುವವರು ರಾಜ್ಯಸರ್ಕಾರದ ವಿವಿಧ ಯೋಜನೆಗಳಡಿ ಸೌಕರ್ಯ ಪಡೆಯಲು ಅನರ್ಹರು ಎಂದು ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಾವು ನಿಧಾನವಾಗಿ ಸರ್ಕಾರಿ ಯೋಜನೆಗಳಿಗೂ ಜನಸಂಖ್ಯಾ ಮಾನದಂಡವನ್ನು ಅನ್ವಯಿಸಲು ನಿರ್ಧರಿಸಿದ್ದೇವೆ. ಹಾಗಂತ ಕೆಲವು ಯೋಜನೆಗಳಿಗೆ ಎರಡು ಮಕ್ಕಳ ನೀತಿಯನ್ನು ಅನ್ವಯ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಶಾಲಾ-ಕಾಲೇಜುಗಳಿಗೆ ಉಚಿತ ಪ್ರವೇಶ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುವಂಥ ಯೋಜನೆಗಳಲ್ಲಿ ಎರಡು ಮಕ್ಕಳ ನೀತಿಯನ್ನು ಅಳವಡಿಸುವುದಿಲ್ಲ. ಇವೆಲ್ಲ ಯಾವಾಗಲೂ ಎಲ್ಲರಿಗೂ ಅನ್ವಯ ಆಗುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವು ಆಯ್ದ ಯೋಜನೆಗಳಡಿ ಸೌಕರ್ಯ ಪಡೆಯಬೇಕೆಂದರೆ ಅವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಪ್ರತಿಪಕ್ಷಗಳು ತಮ್ಮ ಕುಟುಂಬವನ್ನು ಟೀಕಿಸಿದ್ದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶರ್ಮಾ, 1970ರ ಸಮಯದಲ್ಲಿದ್ದ ಕುಟುಂಬಗಳ ಮಾತನಾಡುವುದು ಸರಿಯಲ್ಲ. ನನ್ನ ಅಥವಾ ಅದೇ ಕಾಲದಲ್ಲಿದ್ದ ಬೇರೆ ತಂದೆ-ತಾಯಿ ಎಷ್ಟು ಮಕ್ಕಳನ್ನು ಹೊಂದಿದ್ದರು ಎಂಬುದರ ಬಗ್ಗೆ ಈಗ ಚರ್ಚೆ ಮಾಡುವುದು ಮೂರ್ಖತನ ಎಂದಿದ್ದಾರೆ.
ಅಸ್ಸಾಂಗೆ ವಲಸೆ ಬಂದ ಮುಸ್ಲಿಂ ಕುಟುಂಬಗಳು ಕುಟುಂಬ ಯೋಜನೆ ನಿಯಮಗಳನ್ನು ಅಳವಡಿಸಿಕೊಂಡರೆ ಇಲ್ಲಿರುವ ಅದೆಷ್ಟೋ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಈ ತಿಂಗಳ ಪ್ರಾರಂಭದಲ್ಲಿ ಹೇಳಿಕೆ ನೀಡಿದ್ದ ಹಿಮಂತ್ ಬಿಸ್ವಾ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮುಸ್ಲಿಂರನ್ನು ಬಡತನದಿಂದ ಹೊರತರಬೇಕು ಎಂದರೆ ಜನಸಂಖ್ಯೆಗೆ ಕಡಿವಾಣ ಹಾಕುವ ಬಗ್ಗೆ ಆ ಸಮುದಾಯದ ಮಹಿಳೆಯರಿಗೆ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಮುಸ್ಲಿಮರು ನಮ್ಮೊಂದಿಗೆ ಕೈಜೋಡಿಸಿ, ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಅದಾದ ಬೆನ್ನಲ್ಲೇ ಪ್ರತಿಪಕ್ಷಗಳು ಹಿಮಂತ ಬಿಸ್ವಾ ಶರ್ಮಾರ ಕುಟುಂಬವನ್ನೇ ಟೀಕಿಸಿದ್ದವು. ಹಿಮಂತ ಬಿಸ್ವಾ ಶರ್ಮಾರ ತಂದೆ ತಾಯಿಗೆ ಒಟ್ಟೂ ಐವರು ಮಕ್ಕಳಿರುವ ಬಗ್ಗೆ ವ್ಯಂಗ್ಯ ಮಾಡಿದ್ದವು.
ಇದನ್ನೂ ಓದಿ: ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ವೈರಸ್ ಸೋಂಕನ್ನು ತಪ್ಪಿಸುವುದು ಹೇಗೆ?