
ಗುವಾಹಟಿ: ಅಸ್ಸಾಂ ರಾಜ್ಯದ ದಿಮಾ ಹಸಾವೋ (Dima Hasao) ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಶಂಕಿತ ಉಗ್ರರು 7 ಟ್ರಕ್ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಗುಂಡಿನ ದಾಳಿ ನಡೆಸಿದ ಬಳಿಕ ಉಗ್ರರು ಆ ಟ್ರಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ 7 ಟ್ರಕ್ಗಳು ಕೂಡ ಸುಟ್ಟು ಕರಕಲಾಗಿವೆ.
ಗುರುವಾರ ರಾತ್ರಿ ಮಾರ್ಗ ಮಧ್ಯೆ ಟ್ರಕ್ಗಳನ್ನು ಅಡ್ಡ ಹಾಕಿದ ಉಗ್ರರು ಈ ಕೃತ್ಯ ಎಸಗಿದ್ದಾರೆ. ದಾಳಿ ನಡೆಸಿದವರು ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ (ಡಿಎನ್ಎಲ್ಎ) ಸಂಘಟನೆಗೆ ಸೇರಿದ ಉಗ್ರರು ಎನ್ನಲಾಗಿದೆ. ಈ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ರಸ್ತೆಯಲ್ಲಿ ಅಡ್ಡ ಹಾಕಿದ ಉಗ್ರರು ಟ್ರಕ್ ಹಾಗೂ ಟ್ರಕ್ ಚಾಲಕರ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ.
ನಿನ್ನೆ ರಾತ್ರಿ 8.30ರ ಸುಮಾರಿಗೆ ಅಸ್ಸಾಂನ ಶಸ್ತ್ರಸಜ್ಜಿತ ಉಗ್ರರ ಗುಂಪು ದಿಮಾ ಹಸಾವೊ ಜಿಲ್ಲೆಯಲ್ಲಿ ಈ ದಾಳಿ ನಡೆಸಿದ್ದು, ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗುಂಡು ಹಾರಿಸಿದ ಬಳಿಕ ಬೆಂಕಿ ಹಚ್ಚಿದ್ದರಿಂದ ಸಿಮೆಂಟ್ ಸಾಗಿಸುತ್ತಿದ್ದ 6 ಟ್ರಕ್ಗಳು ಮತ್ತು ಕಲ್ಲಿದ್ದಲು ತುಂಬಿದ 1 ಟ್ರಕ್ ಸುಟ್ಟು ಕರಕಲಾಗಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳುಹಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಮೊದಲು ಉಗ್ರರು ಆಟೋಮ್ಯಾಟಿಕ್ ಗನ್ಗಳಿಂದ ಗುಂಡು ಹಾರಿಸಿದ್ದಾರೆ. ನಂತರ ಟ್ರಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ದಾಳಿಯ ಹಿಂದೆ ಡಿಎನ್ಎಲ್ಎ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸಾವನ್ನಪ್ಪಿರುವ ಐವರಲ್ಲಿ ಟ್ರಕ್ ಚಾಲಕರು ಹಾಗೂ ಸಹಾಯಕರು ಸೇರಿದ್ದಾರೆ ಎಂದು ದಿಮಾ ಹಸಾವೋ ಜಿಲ್ಲೆಯ ಎಸ್ಪಿ ಜಯಂತ್ ಸಿಂಗ್ ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಟ್ರಕ್ ಮೇಲೆ ದಾಳಿ
ಈ ದಾಳಿಗೆ ಕಾರಣವೇನೆಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Kazakhstan Blast: ಕಾಬೂಲ್ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆ ಬಳಿಯೂ ಭಾರೀ ಸ್ಫೋಟ
Kabul Blast: ಇವನೇ ನೋಡಿ ಕಾಬೂಲ್ ಸೂಸೈಡ್ ಬಾಂಬರ್; ಹೊಣೆಹೊತ್ತ ISIS-Kಯಿಂದ ಅಬ್ದುಲ್ ರೆಹಮಾನ್ ಫೋಟೋ ರಿಲೀಸ್
(Assam Terror Attack: 5 Killed In Assams Dima Hasao District After Suspected Militants Attack and Sets Trucks On Fire)
Published On - 12:54 pm, Fri, 27 August 21