ದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಸಂಜೆ 6ಗಂಟೆಗೆ ಮುಗಿದಿದ್ದು, 5.30ರವರೆಗೆ ಅಸ್ಸಾಂನಲ್ಲಿ ಶೇ 77 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 80.43 ಮತದಾನವಾಗಿದೆ. ಪಶ್ಚಿಮ ಬಂಗಾಳದ ಪ್ರತಿಷ್ಠಿತ ಕಣವಾದ ನಂದಿಗ್ರಾಮದಲ್ಲಿ ಇಂದು ಚುನಾವಣೆ ನಡೆದಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕಣದಲ್ಲಿದ್ದಾರೆ. ಎರಡನೇ ಹಂತದ ಮತದಾನದ ವೇಳೆ ಹಲವಾರು ಮತಗಟ್ಟೆಗಳಲ್ಲಿ ಅಹಿತಕರ ಘಟನೆಗಳು ನಡೆದಿದೆ.
ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾರರಿಗೆ ಮತದಾನ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಮತಗಟ್ಟೆಯಿಂದಲೇ ರಾಜ್ಯಪಾಲ ಜಗದೀಪ್ ಧನ್ಕರ್ ಅವರಿಗೆ ಫೋನ್ ಮಾಡಿ ದೂರಿದ್ದಾರೆ. ಅವರು ಇಲ್ಲಿನ ಸ್ಥಳೀಯರಿಗೆ ಮತದಾನ ಮಾಡಲು ಬಿಡುತ್ತಿಲ್ಲ. ಬೆಳಗ್ಗಿನಿಂದ ನಾನು ಪ್ರಚಾರ ಮಾಡುತ್ತಿದ್ದೆ. ನೀವು ಇದನ್ನೊಮ್ಮೆ ದಯವಿಟ್ಟು ನೋಡಿ ಎಂದು ಮಮತಾ ಫೋನ್ ನಲ್ಲಿ ಹೇಳಿದ್ದಾರೆ.
ನಂದಿಗ್ರಾಮದ ಮತಗಟ್ಟೆಯಲ್ಲಿ ಹಿಂಸಾಚಾರ; ವರದಿ ಸಲ್ಲಿಸಲು ಆದೇಶಿಸಿದ ಚುನಾವಣಾ ಆಯೋಗ
ನಂದಿಗ್ರಾಮದ ಬೋಯಲ್ ಪ್ರದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ. ಮತದಾನ ಪ್ರಕ್ರಿಯೆಯನ್ನು ನೋಡಲು ಮಮತಾ ಬ್ಯಾನರ್ಜಿ ಹಲವಾರು ಮತಗಟ್ಟೆಗಳಿಗೆ ಇಂದು ಭೇಟಿ ನೀಡಿದ್ದರು. ಮಮತಾ ಬ್ಯಾನರ್ಜಿ ಅವರು ಬೋಯಲ್ ಗೆ ತಲುಪಿದ ಕೂಡಲೇ ಬಿಜೆಪಿ ಬೆಂಬಲಿಗರು ಜೈಶ್ರೀರಾಂ ಘೋಷಣೆ ಕೂಗಲು ಆರಂಭಿಸಿದ್ದಾರೆ . ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಸಂಘರ್ಷವೇರ್ಪಟ್ಟಿದ್ದು ಬೂತ್ ಸಂಖ್ಯೆ 7ರಲ್ಲಿ ಮರು ಮತದಾನ ನಡೆಸಬೇಕು ಎಂದು ಟಿಎಂಸಿ ನಾಯಕರು ಒತ್ತಾಯಿಸಿದ್ದಾರೆ.
#WATCH: West Bengal CM Mamata Banerjee speaks to Governor Jagdeep Dhankhar over the phone at a polling booth in Nandigram. She says, “…They didn’t allow the local people to cast their vote. From morning I am campaigning…Now I am appealing to you, please see…” pic.twitter.com/mjsNQx38BB
— ANI (@ANI) April 1, 2021
ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದ ಮಮತಾ
ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಅಹಿತಕರ ಘಟನೆ ನಡೆದಿದ್ದು, ಈ ಬಗ್ಗೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಳಗ್ಗಿನಿಂದ ಇಲ್ಲಿಯವರೆಗೆ ನಮ್ಮ ಪಕ್ಷ 63 ದೂರುಗಳನ್ನು ನೀಡಿದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಮುಂದಾಗಿಲ್ಲ ಇದು ಸರಿಯಲ್ಲ. ಇದನ್ನು ಪ್ರಶ್ನಿಸಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದಿದ್ದಾರೆ ಮಮತಾ. ನಂದಿಗ್ರಾಮದ ಬೋಯಲ್ ಪ್ರದೇಶದಲ್ಲಿ ಬೂತ್ ಸಂಖ್ಯೆ 7ರ ಹೊರಗೆ ಗಾಲಿ ಕುರ್ಚಿಯಲ್ಲಿ ಕುಳಿತ ಮಮತಾ, ಚುನಾವಣಾ ಆಯೋಗವು ಅಮಿತ್ ಶಾ ಅವರ ಅಣತಿಯಂತೆ ಕಾರ್ಯವೆಸಗುತ್ತಿದೆ. ಇಲ್ಲಿ ಸಮಸ್ಯೆ ಸೃಷ್ಟಿಸುವುದಕ್ಕಾಗಿಯೇ ಹೊರಗಿನ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿದೆ ಎಂದು ಆರೋಪಿಸಿದ್ದಾರೆ.
She’s insulting voters. It has become her habit to insult people of Nandigram. She received injuries in an accident but levelled allegations. Governor’s is a constitutional post, she can speak to him, no problem. EC conducts polls, not Governor or President: Suvendu Adhikari, BJP pic.twitter.com/CULlRUI0Md
— ANI (@ANI) April 1, 2021
ಮಮತಾ ಮತದಾರರನ್ನು ಅವಮಾನಿಸುತ್ತಿದ್ದಾರೆ: ಸುವೇಂದು ಅಧಿಕಾರಿ
ಮಮತಾ ಬ್ಯಾನರ್ಜಿ ಅವರು ಮತದಾರರನ್ನು ಅವಮಾನಿಸುತ್ತಿದ್ದಾರೆ. ನಂದಿಗ್ರಾಮದ ಜನರನ್ನು ಅವಮಾನಿಸುವುದು ಅವರ ಹವ್ಯಾಸ ಆಗಿಬಿಟ್ಟಿದೆ. ಅಪಘಾತದಲ್ಲಿ ಅವರಿಗೆ ಗಾಯವಾಗಿತು, ಅದನ್ನೇ ಅವರು ದೊಡ್ಡದು ಮಾಡಿ ಆರೋಪ ಮಾಡಿದರು. ರಾಜ್ಯಪಾಲರು ಸಂವಿಧಾನಿಕ ಹುದ್ದೆಯಲ್ಲಿರುವವರು. ಅವರಲ್ಲಿ ಆಕೆ ಮಾತನಾಡಬಹುದು ಸಮಸ್ಯೆ ಏನಿಲ್ಲ. ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗ, ರಾಜ್ಯಪಾಲರು ಅಥವಾ ರಾಷ್ಟ್ರಪತಿ ಅಲ್ಲ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Assam, West Bengal Elections 2021: ಪಶ್ಚಿಮ ಬಂಗಾಳದಲ್ಲಿ ಶೇಕಡಾ 37.42, ಅಸ್ಸಾಂನಲ್ಲಿ ಶೇ 33.24 ಮತದಾನ
(Assembly Elections 2nd Phase West Bengal sees 80.43 percent while Assam has recorded 73.03 percent turnout till 5.30 pm)
Published On - 7:19 pm, Thu, 1 April 21