ಅವಂತಾ ಗ್ರೂಪ್​ ಸಂಸ್ಥಾಪಕ ಗೌತಮ್ ಥಾಪರ್​ ಅರೆಸ್ಟ್​​; ಇಂದು ಕೋರ್ಟ್​ಗೆ ಹಾಜರು ಪಡಿಸಲಿರುವ ಇ.ಡಿ.

| Updated By: Lakshmi Hegde

Updated on: Aug 04, 2021 | 10:05 AM

ಗೌತಮ್​ ಥಾಪರ್​ ಈ ಅವಂತಾ ಗ್ರೂಪ್​ನ್ನು 2007ರಲ್ಲಿ ಹುಟ್ಟುಹಾಕಿದ್ದಾರೆ. ಬಹುಮುಖ್ಯವಾಗಿ ಯೆಸ್​ ಬ್ಯಾಂಕ್​ಗೆ 467 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಅವಂತಾ ಗ್ರೂಪ್​ ಸಂಸ್ಥಾಪಕ ಗೌತಮ್ ಥಾಪರ್​ ಅರೆಸ್ಟ್​​; ಇಂದು ಕೋರ್ಟ್​ಗೆ ಹಾಜರು ಪಡಿಸಲಿರುವ ಇ.ಡಿ.
ಗೌತಮ್​ ಥಾಪರ್​
Follow us on

ಅವಂತಾ ಗ್ರೂಪ್(Avantha Group)​ನ ಪ್ರವರ್ತಕ ಗೌತಮ್​ ಥಾಪರ್(Gautam Thapar)​ರನ್ನು, ಅಕ್ರಮ ಹಣ ವರ್ಗಾವಣೆ  ಪ್ರಕರಣ(Money Laundering case)ದಡಿ ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಗೌತಮ್​ ಥಾಪರ್​ಗೆ ಸೇರಿದ ಹಲವು ಪ್ರದೇಶಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ, ಇವರನ್ನು ಹಲವು ಬಾರಿ ವಿಚಾರಣೆಗೂ ಒಳಪಡಿಸಿದ್ದರು. ಥಾಪರ್​ ನಿವಾಸವನ್ನಷ್ಟೇ ಅಲ್ಲದೆ, ಅವಂತಾ ಗ್ರೂಪ್​ನ ಹಲವು ಹಿರಿಯ ಅಧಿಕಾರಿಗಳಿಗೆ ಸೇರಿದ ಜಾಗಗಳ ಮೇಲೆಯೂ ರೈಡ್ ಮಾಡಿದ್ದರು. ಅಂತಿಮವಾಗಿ ಗೌತಮ್​ ಅವರನ್ನೀಗ ಬಂಧಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಗೌತಮ್​ ಥಾಪರ್​ ಈ ಅವಂತಾ ಗ್ರೂಪ್​ನ್ನು 2007ರಲ್ಲಿ ಹುಟ್ಟುಹಾಕಿದ್ದಾರೆ. ಬಹುಮುಖ್ಯವಾಗಿ ಯೆಸ್​ ಬ್ಯಾಂಕ್​ಗೆ 467 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಇವರನ್ನು ಸದ್ಯ ಇಡಿ ಬಂಧಿಸಿದ್ದು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ವಿಚಾರಣೆ ವೇಳೆ, ಗೌತಮ್​​ ಅವರನ್ನು ತಮ್ಮ ಕಸ್ಟಡಿಗೆ ಕೊಡಿ. ಇನ್ನೂ ವಿಚಾರಣೆ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗಿದೆ.

ಅವಂತಾ ರಿಯಾಲ್ಟಿ ಲಿಮಿಟೆಡ್​ಗೆ ಅಕ್ರಮವಾಗಿ ಸಾಲ ನೀಡಿದ್ದ ಯೆಸ್​ ಬ್ಯಾಂಕ್​​ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್​, ಅದಕ್ಕೆ ಬದಲಾಗಿ ದೆಹಲಿಯ ಪ್ರಮುಖ ಪ್ರದೇಶವೊಂದರಲ್ಲಿ ಇದ್ದ, ಅವಂತಾ ಗ್ರೂಪ್​​ಗೆ ಸೇರಿದ್ದ ಆಸ್ತಿಯೊಂದನ್ನು ಮಾರುಕಟ್ಟೆ ಬೆಲೆಗಿಂತಲೂ ತುಂಬ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿದ್ದರು. ಇಲ್ಲಿ ಆವಂತಾ ಗ್ರೂಪ್​ ಮತ್ತು ಯೆಸ್​ ಬ್ಯಾಂಕ್​ನ ಅಂದಿನ ಎಂಡಿ ನಡುವೆ ಪರಸ್ಪರ ಸಹಕಾರ ಏರ್ಪಟ್ಟಿತ್ತಾದರೂ ಹಣದ ವಿಚಾರದಲ್ಲಿ ಅಕ್ರಮ ನಡೆದಿತ್ತು. ಇದನ್ನು ಇ.ಡಿ. ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಬರೀ ಇಷ್ಟೇ ಅಲ್ಲ, ಇನ್ನೊಂದು ಪ್ರಕರಣದಲ್ಲಿ ಎಸ್​ಬಿಐ ಗೌತಮ್​ ಥಾಪರ್​ ವಿರುದ್ಧ ದೂರು ನೀಡಿದೆ. ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟಕ್ಕೆ ಸುಮಾರು 2435 ಕೋಟಿ ರೂ.ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರಣೆ ಸಿಬಿಐ ನಡೆಸುತ್ತಿದೆ.

ಇದನ್ನೂ ಓದಿ: Tirupati Temple : ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 1.80 ಕೋಟಿ ರೂ. ಸಂಗ್ರಹ

ಕನ್ನಡ ಮಾಧ್ಯಮಕ್ಕೆ ಧಕ್ಕೆ ಆಗದಂತೆ ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಅಳವಡಿಕೆ: ಡಿಡಿಪಿಐಗಳಿಗೆ ಅಧಿಕಾರ

Published On - 9:56 am, Wed, 4 August 21