
ಅಯೋಧ್ಯೆ, ಜೂ.29: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯನ್ನು ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಈಗ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ಅಧಿಕಾರಿಗಳು ಶಾಕ್ ಆಗುವ ಘಟನೆಯೊಂದು ನಡೆದಿದೆ. ಕೇವಲ 22 ವರ್ಷ ವಯಸ್ಸಿನ, ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಬ್ಯಾಂಕ್‌ನ ಔಟ್‌ಸೋರ್ಸಿಂಗ್ ಸಿಬ್ಬಂದಿ ಅನುಕಲ್ಪ್ ಮಿಶ್ರಾ, ರಾಮನ ದುಡ್ಡನ್ನು ಕದ್ದು ಅಲ್ಪಾವಧಿಯಲ್ಲೇ ಕೋಟ್ಯಾಧಿಪತಿಯಾಗಿರುವ ಸತ್ಯ ತನಿಖೆಯಲ್ಲಿ ಬಯಲಾಗಿದೆ. ಆತನ ಆದಾಯದ ಮೂಲಗಳನ್ನು ಮೀರಿದ ಭಾರಿ ಆಸ್ತಿಗಳ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಅನುಕಲ್ಪ್ ಮಿಶ್ರಾ ಕೇವಲ 15,000 ರೂಪಾಯಿ ಮಾಸಿಕ ವೇತನ ಪಡೆಯುತ್ತಿದ್ದನು. ಆದರೆ ಈತನ ಹೆಸರಿನಲ್ಲಿ ಪತ್ತೆಯಾಗಿರುವ ಆಸ್ತಿಗಳ ಪಟ್ಟಿ ನೋಡಿದರೆ ಇಡೀ ತನಿಖಾ ತಂಡವೇ ಬೆಚ್ಚಿಬಿದ್ದಿದೆ. ಕಳೆದ ವರ್ಷವಷ್ಟೇ ಅಯೋಧ್ಯೆಯಲ್ಲಿ ಸದ್ಯ ಅಂದಾಜು 65 ಲಕ್ಷ ರೂಪಾಯಿ ಮೌಲ್ಯದ ಭವ್ಯವಾದ ಮನೆಯನ್ನು ಈತ ಖರೀದಿಸಿದ್ದಾನೆ. ತನ್ನ ಸ್ವಗ್ರಾಮವಾದ ಬಸಾವಾ ಮೂಲದ ಹೊರವಲಯದಲ್ಲಿ ಇತ್ತೀಚೆಗಷ್ಟೇ ಅತ್ಯಾಧುನಿಕ ಫಾರ್ಮ್‌ಹೌಸ್ ಒಂದನ್ನು ನಿರ್ಮಿಸಿದ್ದಾನೆ. ಇದರ ಜತೆಗೆ ಸ್ವಂತ ವಾಹನ ಹೊಂದಿದ್ದರೂ, ಬಂಧನಕ್ಕೊಳಗಾಗುವ ಕೆಲವೇ ದಿನಗಳ ಮುನ್ನ ಈತ ಹೊಸ ‘ಮಹೀಂದ್ರಾ ಸ್ಕಾರ್ಪಿಯೋ’ ಎಸ್‌ಯುವಿ ಕಾರನ್ನು ಬುಕ್ ಮಾಡಿದ್ದನು.
ಇಷ್ಟೇ ಅಲ್ಲದೆ, 1 ಲಕ್ಷಕ್ಕೂ ಅಧಿಕ ಮೌಲ್ಯದ ಹೊಸ ಬ್ರ್ಯಾಂಡೆಡ್ ಮೋಟಾರ್ ಸೈಕಲ್ ಖರೀದಿ ಮಾಡಿದ್ದ ಈತ , ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ತನ್ನ ಹಳ್ಳಿಯಲ್ಲಿ ಪ್ರಭಾವಿ ಗಣ್ಯರನ್ನು ಕರೆಸಿ, ಭಾರಿ ದುಬಾರಿ ವೆಚ್ಚದಲ್ಲಿ 7 ದಿನಗಳ ಕಾಲ ಬೃಹತ್ ಧಾರ್ಮಿಕ ಆಚರಣೆಯನ್ನು ಆಯೋಜಿಸಿದ್ದನು.
ಭಾನುವಾರ ಕೌಶಲ್ಪುರಿಯಲ್ಲಿರುವ ಅನುಕಲ್ಪ್ ಮಿಶ್ರಾ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಅಡಗಿಸಿಟ್ಟಿದ್ದ ಪ್ರಮುಖ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಭಕ್ತರ ಹಣವನ್ನು ದುರುಪಯೋಗಪಡಿಸಿಕೊಂಡೇ ಈ ಎಲ್ಲಾ ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಆತನ ಬ್ಯಾಂಕ್ ಖಾತೆಗಳು, ಆದಾಯ ತೆರಿಗೆ ರಿಟರ್ನ್ಸ್ (ITಆರ್), ಇನ್ಶೂರೆನ್ಸ್ ಪಾಲಿಸಿಗಳು ಮತ್ತು ಲಾಕರ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಕುಟುಂಬದ ಆರ್ಥಿಕ ಸ್ಥಿತಿ ನಂಬಲಾಗದ ರೀತಿಯಲ್ಲಿ ಸುಧಾರಿಸಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಕೇವಲ ಅನುಕಲ್ಪ್ ಮಿಶ್ರಾ ಮಾತ್ರವಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಬಂಧನದಲ್ಲಿರುವ ಇತರ ಎಲ್ಲಾ 7 ಜನ ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಹಣ ಎಲ್ಲೆಲ್ಲಿಗೆ ವರ್ಗಾವಣೆಯಾಗಿದೆ (Money Trail) ಎಂಬುದನ್ನು ಪತ್ತೆ ಹಚ್ಚಲು ಇತ್ತೀಚಿನ ವರ್ಷಗಳಲ್ಲಿ ಅವರು ನಡೆಸಿದ ಭೂಮಿ ಖರೀದಿ, ಮಾರಾಟ ಒಪ್ಪಂದಗಳು ಮತ್ತು ದೊಡ್ಡ ಮೊತ್ತದ ಹಣಕಾಸು ವಹಿವಾಟುಗಳ ದಾಖಲೆಗಳನ್ನು ಸ್ಕ್ರೂಟಿನಿ ಮಾಡಲಾಗುತ್ತಿದೆ. ದೇವರ ಕಾಣಿಕೆ ಹಣದಲ್ಲಿ ಅಕ್ರಮ ಆಸ್ತಿ ಗಳಿಸಿರುವುದು ಸಾಬೀತಾದರೆ ಇಡೀ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಹಗರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ಸ್ಪಷ್ಟವಾಗಿ ನಿರಾಕರಿಸಿದೆ. ಪ್ರಕರಣದ ತುರ್ತು ಪಟ್ಟಿ ಮಾಡುವಿಕೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಬೇಸಿಗೆ ರಜೆ ಮುಗಿದ ಬಳಿಕವಷ್ಟೇ ಅರ್ಜಿಯನ್ನು ನಿಯಮಿತವಾಗಿ ವಿಚಾರಣೆಗೆ ಪಟ್ಟಿ ಮಾಡಲು ನಿರ್ಧರಿಸಿದೆ. ನ್ಯಾಯಮೂರ್ತಿಗಳಾದ ನ್ಯಾ. ಎಂ. ಎಂ. ಸುಂದರೇಶ್ ಮತ್ತು ನ್ಯಾ. ಶೀಲ್ ನಾಗು ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರು ಪ್ರಕರಣದ ಗಾಂಭೀರ್ಯತೆಯನ್ನು ಉಲ್ಲೇಖಿಸಿ ತುರ್ತು ವಿಚಾರಣೆಗೆ ಪಟ್ಟು ಹಿಡಿದಾಗ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, “ಈಗಲೇ ಅರ್ಜಿ ವಿಚಾರಣೆ ನಡೆಸಲು ಇಷ್ಟೊಂದು ಅವಸರ ಏಕೆ? ಆಕಾಶವೇನೂ ಉರುಳಿ ಬೀಳುತ್ತಿಲ್ಲ, ರಜೆ ಮುಗಿದ ಬಳಿಕ ನೋಡೋಣ” ಎಂದು ಹೇಳಿದೆ. ಸದ್ಯ ಈ ಹಗರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡ (SIT) ನಡೆಸುತ್ತಿದೆ. ಆದರೆ, ಕೇವಲ ಆಡಳಿತಾತ್ಮಕ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ನಮಗೆ ತೀವ್ರ ಶಂಕೆಯಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕಾಗಿ ದೇಶ-ವಿದೇಶಗಳ ಕೋಟ್ಯಾಂತರ ಭಕ್ತರು ತಮ್ಮ ಆಸ್ತೆ ಹಾಗೂ ನಂಬಿಕೆಯಿಂದ ದೇಣಿಗೆ ನೀಡಿದ್ದಾರೆ. ಈ ಕೋಟ್ಯಾಂತರ ಜನರ ಭಾವನೆ ಮತ್ತು ನಂಬಿಕೆಯನ್ನು ರಕ್ಷಿಸಲು ಹಾಗೂ ಸತ್ಯವನ್ನು ಹೊರತರಲು ಪ್ರಕರಣವನ್ನು ತಕ್ಷಣವೇ ಸ್ವತಂತ್ರ ಸಂಸ್ಥೆಯಾದ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Mon, 29 June 26