ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ram Temple) ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂಬುದು ಗೊತ್ತು. ಆದರೆ ಅದು ಯಾವಾಗ ಮುಗಿಯಬಹುದು? ಭಕ್ತರಿಗೆ ಪ್ರವೇಶಕ್ಕೆ ಯಾವಾಗಿನಿಂದ ಅವಕಾಶ ದೊರೆಯಬಹುದು-ಎಂಬಿತ್ಯಾದಿ ಕುತೂಹಲ ಇದ್ದೇ ಇದೆ. ಕಳೆದ ವರ್ಷ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಶ್ರೀರಾಮಮಂದಿರ (Ayodhya Ram Mandir) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಆಗಿನಿಂದಲೂ ಅಲ್ಲಿ ಕೆಲಸ ನಡೆಯುತ್ತಿದ್ದು, ಕೊವಿಡ್ 19 ಸಂದರ್ಭದಲ್ಲೂ ನಿಲ್ಲಲಿಲ್ಲ. ಶ್ರೀರಾಮಂದಿರ ನಿರ್ಮಾಣದೊಟ್ಟಿಗೆ, ಅಯೋಧ್ಯೆಯ ಸಮಗ್ರ ಅಭಿವೃದ್ಧಿಗೆ ಸಂಬಂಧ ಉತ್ತರ ಪ್ರದೇಶ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಹೀಗಿರುವಾಗ ಅಯೋಧ್ಯೆ ಶ್ರೀರಾಮಂದಿರಕ್ಕೆ ಭಕ್ತರಿಗೆ ಪ್ರವೇಶ ಸಿಗಲು 2023ರವರೆಗೆ ಕಾಯಲೇಬೇಕು ಎಂದು ಇಂದು ಎಎನ್ಐ ವರದಿ ಮಾಡಿದೆ. 2023ರ ಡಿಸೆಂಬರ್ನಿಂದ ರಾಮಮಂದಿರಕ್ಕೆ ಹೋಗಲು, ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ ಸಿಗಲಿದೆ. ಇನ್ನೂ ಒಂದೂವರೆ ವರ್ಷವಷ್ಟೇ ಬಾಕಿ ಇದ್ದು, ಶ್ರೀರಾಮನ ಭಕ್ತರಿಗೆ ಇದೊಂದು ಸಿಹಿ ಸುದ್ದಿಯೇ ಆಗಿದೆ. ಆದಾಗ್ಯೂ ದೇಗುಲದ ಸುತ್ತ ಸುಮಾರು 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಆಗುತ್ತಿರುವ ಕ್ಯಾಂಪಸ್ 2025ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇದು ಶ್ರೀರಾಮಮಂದಿರ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮೂಲಗಳಿಂದಲೇ ಸಿಕ್ಕ ಮಾಹಿತಿ ಎಂದೂ ಎಎನ್ಐ ತಿಳಿಸಿದೆ.
ಸದ್ಯ ಶ್ರೀರಾಮಮಂದಿರಕ್ಕೆ ಅಡಿಪಾಯ ಹಾಕುವ ಕಾರ್ಯ ಭರದಿಂದ ಸಾಗುತ್ತಿದ್ದು, ಮೊದಲ ಹಂತದ ಕೆಲಸ ಸೆಪ್ಟೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಹಾಗೇ, ಎರಡನೇ ಹಂತ ನವೆಂಬರ್ನಿಂದ ಶುರುವಾಗಲಿದೆ.