ದೆಹಲಿ: ಕೊರೊನಾ ಮಹಾಮಾರಿಯನ್ನು ಬಗ್ಗುಬಡಿಯಲು ಸಾಂಪ್ರದಾಯಿಕ ಆಯುರ್ವೇದ ಔಷಧಿಯನ್ನು ಕಂಡುಹಿಡಿದಿರುವುದಾಗಿ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಘೋಷಿಸಿದೆ. ಇದರ ಬೆನ್ನಲ್ಲೇ ಕೇಂದ್ರದ ಆಯುಷ್ ಮಂತ್ರಾಲಯವು ಔಷಧಿ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಪತಂಜಲಿ ಸಂಸ್ಥೆಗೆ ಸೂಚನೆ ನೀಡಿದೆ. ಜೊತೆಗೆ ಔಷಧದ ಸಂಪೂರ್ಣ ಪರೀಕ್ಷೆ ನಡೆದು ವರದಿ ಬರುವ ತನಕ ಅದರ ಬಗ್ಗೆ ಯಾವುದೇ ಜಾಹಿರಾತು ನೀಡಬಾರದು ಅಥವಾ ಪ್ರಚಾರ ನಡೆಸಬಾರದು ಎಂದು ತಾಕೀತು ಸಹ ಮಾಡಿದೆ.
ಕೊರೊನಾ ವಿರುದ್ಧ ಕೊರೊನಿಲ್ ಎಂಬ ಹೆಸರಿನ ಆಯುರ್ವೇದಿಕ್ ಔಷಧ ಕಂಡುಹಿಡಿದಿದ್ದೇವೆ ಎಂದು ಬಾಬಾ ರಾಮ್ ದೇವ್ ಹಾಗೂ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಇಂದು ಸುದ್ದಿಗೋಷ್ಠಿ ನಡೆಸಿದ್ದರು. 500ಕ್ಕೂ ಹೆಚ್ಚು ತಜ್ಞರ ತಂಡವು ಈ ಔಷಧಿಯನ್ನು ಅಭಿವೃದ್ಧಿಪಡಿಸಿದ್ದು ಇದನ್ನು ಸುಮಾರು 280 ಸೋಂಕಿತರಿಗೆ ಪ್ರಯೋಗವಾಗಿ ನೀಡಿದ್ದೆವು. ಅವರೆಲ್ಲರೂ ಸೋಂಕಿನಿಂದ ಚೇತರಿಸಿಕೊಂಡು ಸಂಪೂರ್ಣವಾಗಿ ಗುಣಮುಖರಾಗಿದ್ದರು ಎಂದೂ ಸಹ ಘೋಷಣೆ ಮಾಡಿದ್ದರು.