ಆ 12 ದಿನಗಳು.. ಪುಲ್ವಾಮಾ ಸ್ಫೋಟದಿಂದ ಬಾಲಾಕೋಟ್​ ವಾಯುದಾಳಿಯವರೆಗೆ

| Updated By: ಆಯೇಷಾ ಬಾನು

Updated on: Feb 26, 2021 | 6:20 AM

2 Years of Balakot Air Strike: ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಫೆಬ್ರವರಿ 26ರ ಮುಂಜಾನೆ ಪಾಕಿಸ್ತಾನದ ಸುಮಾರು 300 ಉಗ್ರರು ನಾಶವಾಗಿದ್ದರು. ಪಾಕಿಸ್ತಾನಕ್ಕೆ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರೇ ಸಾಕಿದ ಉಗ್ರರ ನೆಲೆಯನ್ನು ನಾಶ ಮಾಡಿ ಬಂದಿತ್ತು ಭಾರತೀಯ ವಾಯುಪಡೆ.

ಆ 12 ದಿನಗಳು.. ಪುಲ್ವಾಮಾ ಸ್ಫೋಟದಿಂದ ಬಾಲಾಕೋಟ್​ ವಾಯುದಾಳಿಯವರೆಗೆ
ಸಾಂದರ್ಭಿಕ ಚಿತ್ರ
Follow us on

ಪುಲ್ವಾಮಾದಲ್ಲಿ ದಾಳಿ ಮಾಡಿ 40 ಭಾರತೀಯ ಸೈನಿಕರು ಹುತಾತ್ಮರಾಗಲು ಪಾಕಿಸ್ತಾನ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಸ್ವತಃ ಜೈಷ್​-ಎ-ಮೊಹಮ್ಮದ್ ಉಗ್ರ​ ಸಂಘಟನೆ ದಾಳಿಯ ಹೊಣೆ ಹೊತ್ತಿದ್ದರೂ, ಪಾಕಿಸ್ತಾನ ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡಿತ್ತು. ನಮ್ಮ ಕೈವಾಡವಿದೆ ಎನ್ನುವುದಕ್ಕೆ ಸಾಕ್ಷ್ಯ ನೀಡಿ ಎಂದು ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ತೆರೆಯ ಹಿಂದೆ ಭಾರತ ಸಿದ್ಧತೆ ಮಾಡಿಕೊಂಡಿತ್ತು. ಭಾರತೀಯ ವಾಯುಸೇನೆಗೆ ದಾಳಿಯ ಹೊಣೆ ವಹಿಸಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಫೆಬ್ರವರಿ 26ರ ಮುಂಜಾನೆ ಪಾಕಿಸ್ತಾನದ ಸುಮಾರು 300 ಉಗ್ರರು ನಾಶವಾಗಿದ್ದರು. ಪಾಕಿಸ್ತಾನಕ್ಕೆ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರೇ ಸಾಕಿದ ಉಗ್ರರ ನೆಲೆಯನ್ನು ನಾಶ ಮಾಡಿ ಬಂದಿತ್ತು ಭಾರತೀಯ ವಾಯುಪಡೆ. ಈ ಘಟನೆಯ ಸಂಪೂರ್ಣ ಟೈಮ್​ಲೈನ್​ ನಿಮ್ಮ ಮುಂದಿದೆ..

ಫೆಬ್ರವರಿ 14, 2019: ಪುಲ್ವಾಮಾ ದಾಳಿ 
ಅದು ಫೆಬ್ರವರಿ 14. ವಿಶ್ವಾದ್ಯಂತ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತಿತ್ತು. ಭಾರತ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ #LoveDay #ValentinesDay ಹ್ಯಾಶ್​ಟ್ಯಾಗ್​ಗಳು ಟ್ರೆಂಡ್​ ಆಗಿದ್ದವು. ಆದರೆ, ಏಕಾಏಕಿ ಚಿತ್ರಣವೇ ಬದಲಾಗಿಬಿಟ್ಟಿತ್ತು. ಪಾಕಿಸ್ತಾನದ ಉಗ್ರರು ನಡೆಸಿದ ಹೀನ ಕೃತ್ಯಕ್ಕೆ 40 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಪುಲ್ವಾಮಾದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸಾಲಿನಲ್ಲಿದ್ದ ಸಿಆರ್​ಪಿಎಫ್​ ಬಸ್​ಗೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ಹೊತ್ತು ಬಂದ ಜೀಪ್​ ಡಿಕ್ಕಿ ಹೊಡೆದಿತ್ತು. ಸ್ಫೋಟದ ರಭಸಕ್ಕೆ ವಾಹನಗಳು ಛಿದ್ರವಾಗಿದ್ದವು. 40 ಸೈನಿಕರು ಮೃತಪಟ್ಟಿದ್ದರು. ಜೈಷ್​-ಎ-ಮೊಹಮ್ಮದ್​ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು.

ಫೆ.15: ಕಠಿಣ ಸಂದೇಶ ರವಾನಿಸಿದ ಮೋದಿ
ಒಂದು ಕಡೆ 40 ಸೈನಿಕರ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಕಠಿಣ ಸಂದೇಶವನ್ನು ರವಾನಿಸಿದ್ದರು. ಜನರ ರಕ್ತ ಕುದಿಯುತ್ತಿದೆ. ಈ ಹೀನ ಕೃತ್ಯ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ ನೀಡಿದ್ದರು.
ಇನ್ನು, ಅಮೆರಿಕ ಕೂಡ ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ರವಾನಿಸಿತ್ತು. ತನ್ನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಯೋತ್ಪಾದಕ ಗುಂಪುಗಳಿಗೆ ಒದಗಿಸಿದ ಬೆಂಬಲ ಮತ್ತು ಸುರಕ್ಷಿತ ತಾಣವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಅಮೆರಿಕ, ಪಾಕಿಸ್ತಾನಕ್ಕೆ ಕರೆ ನೀಡಿತ್ತು.

ಪುಲ್ವಾಮಾ ದಾಳಿಯ ದೃಶ್ಯ

ಫೆ.16: ನಮಗೇನು ಗೊತ್ತಿಲ್ಲ ಎಂದ ಪಾಕಿಸ್ತಾನ
ಪಾಕಿಸ್ತಾನ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತ್ತು. ಭಾರತ ಸುಖಾಸುಮ್ಮನೆ ಈ ರೀತಿಯ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿತ್ತು. ಇದರ ಜತೆಗೆ, ದಾಳಿಗೆ ಪಾಕಿಸ್ತಾನದ ಬೆಂಬಲವಿದೆ ಎನ್ನುವುದಕ್ಕೆ ಸೂಕ್ತ ಸಾಕ್ಷ್ಯ ನೀಡಿ ಎಂದು ಭಾರತಕ್ಕೆ ಪಾಕಿಸ್ತಾನ ಸೂಚಿಸಿತ್ತು.

ಪಾಕಿಸ್ತಾನಕ್ಕೆ ಉತ್ತರ ನೀಡಲು ಸಿದ್ಧತೆ..
ಅತ್ತ ಪಾಕಿಸ್ತಾನ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಳ್ಳುತ್ತಿದ್ದರೆ ಇತ್ತ, ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಡ್ರೋನ್‌ಗಳೊಂದಿಗೆ ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಶೀಲನೆ ನಡೆಸಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಸಿದ್ಧತೆ ಮಾಡಿಕೊಂಡಿತ್ತು.

ಫೆ.20 ರಿಂದ 22: ಗುರಿ ನಿರ್ಧಾರ
ಫೆಬ್ರವರಿ 20 ರಿಂದ 22 ರವರೆಗೆ, ಭಾರತೀಯ ವಾಯುಸೇನೆ ಮತ್ತು ಗುಪ್ತಚರ ಸಂಸ್ಥೆಗಳು ದಾಳಿ ನಡೆಸಲು ಸಂಭವನೀಯ ತಾಣಗಳ ನಕ್ಷೆಯನ್ನು ರಚಿಸಿದ್ದವು. ಜತೆಗೆ ದಾಳಿ ನಡೆಸಲು ಯಾವೆಲ್ಲ ಸಿದ್ಧತೆ ಬೇಕು ಅದನ್ನು ಮಾಡಿಕೊಳ್ಳಲು ಆರಂಭಿಸಿದ್ದವು.

ಫೆ.26: ಸರ್ಜಿಕಲ್ ಸ್ಟ್ರೈಕ್
ಬಾಲಾಕೋಟ್​ನ ಗುಡ್ಡದ ಮೇಲಿದ್ದ ಮನೆಯಲ್ಲಿ ಉಗ್ರಗಾಮಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ನಸುಕಿನ 3.30ಕ್ಕೆ ಕಾರ್ಯಾಚರಣೆ ನಡೆಸಿದ ವಾಯುಪಡೆಯ ಜಾಗ್ವಾರ್ ಯುದ್ಧವಿಮಾನಗಳು ಕರಾರುವಾಕ್​ ಆಗಿ ಡೀಪ್ ಪೆನೆಟ್ರೇಶನ್​ ಬಾಂಬ್​ಗಳು ಎಸೆದು, ಸುರಕ್ಷಿತವಾಗಿ ನೆಲೆಗಳಿಗೆ ಹಿಂದಿರುಗಿದವು. ಇವು ಹೊಸರೀತಿಯ ಬಾಂಬ್​ಗಳಾಗಿದ್ದ ಕಾರಣ ಮೇಲ್ನೋಟಕ್ಕೆ ಹೆಚ್ಚು ಅನಾಹುತಗಳು ಸಂಭವಿಸಿದ್ದು ವರದಿಯಾಗಲಿಲ್ಲ. ಆದರೆ ತಾರಸಿಹೊಕ್ಕು ನೆಲ ಮುಟ್ಟಿದ ನಂತರವೇ ಸ್ಫೋಟಿಸಿದ್ದ ಬಾಂಬ್​ಗಳು ವ್ಯಾಪಕ ಹಾನಿ ಮಾಡಿದ್ದವು. ದಾಳಿ ವೇಳೆ 300 ಉಗ್ರರು ಮೃತಪಟ್ಟಿದ್ದರು ಎನ್ನಲಾಗಿದೆ.

ಫೆ.27: ಅಭಿನಂದನ್ ಸೆರೆ
ಭಾರತದ ಭೂಸೇನಾ ನೆಲೆಗಳತ್ತ ದಾಳಿ ನಡೆಸಲು ಬರುತ್ತಿದ್ದ ಪಾಕ್​ ಯುದ್ಧವಿಮಾನಗಳನ್ನು ಭಾರತೀಯ ವಾಯುಸೇನೆ ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್-21 ಬೈಸನ್ ಜೆಟ್​ ಚಲಾಯಿಸುತ್ತಿದ್ದ 37 ವರ್ಷದ ಪೈಲಟ್ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ವಿಮಾನ ಪತನಗೊಂಡಿತ್ತು. ಸೇಫ್ ಎಜೆಕ್ಟ್ ಆಗಿದ್ದ ಅವರು ಪಾಕಿಸ್ತಾನದ ನಾಗರಿಕರ ಕೈಗೆ ಸಿಕ್ಕಿದ್ದರು. ನಂತರ ಪಾಕ್ ಸೇನಾಧಿಕಾರಿಗಳು ಅವರನ್ನು ಬಂಧಿಸಿದರು.

ಮಾರ್ಚ್ 1: ಅಭಿನಂದನ್ ಬಿಡುಗಡೆ
ಭಾರತದ ರಾಜತಾಂತ್ರಿಕ ಒತ್ತಡ, ವಿಶ್ವದ ಹಲವು ದೇಶಗಳಲ್ಲಿ ಕಂಡು ಬಂದ ವ್ಯತಿರಿಕ್ತ ಜನಾಭಿಪ್ರಾಯ ಮತ್ತು ಮತ್ತೊಂದು ದಾಳಿಗೆ ಭಾರತದ ಸೇನಾಪಡೆ ಮಾಡಿಕೊಂಡ ಸಿದ್ಧತೆ ಗಮನಿಸಿದ ಪಾಕಿಸ್ತಾನವು ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿತ್ತು. ಪಾಕಿಸ್ತಾನದಲ್ಲಿ ಸೆರೆ ಸಿಕ್ಕಿದ್ದಾಗ ಅಭಿನಂದನ್ ತೋರಿಸಿದ ಧೈರ್ಯ ಮತ್ತು ಹೇಳಿದ್ದ ‘ಥ್ಯಾಂಕ್ಸ್ ಫಾರ್ ನೈಸ್ ಟ’ ಮಾತು ಜನಪ್ರಿಯವಾಗಿತ್ತು. ಅಭಿನಂದನ್​ರ ಮೀಸೆ ಯುವಜನರ ಜನಪ್ರಿಯ ಸ್ಟೈಲ್​ ಆಗಿತ್ತು.

ಇದನ್ನೂ ಓದಿ: Two Years of Pulwama Attack | ಪುಲ್ವಾಮಾ ದಾಳಿ ಕರಾಳ ದಿನಕ್ಕೆ 2 ವರ್ಷ.. ಅಂದು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಸಲಾಂ