ಕೇರಳ ರೈಲು ನಿಲ್ದಾಣದಲ್ಲಿ 100 ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದ ಮಹಿಳೆ ಪೊಲೀಸ್​ ವಶಕ್ಕೆ, ಹೆಚ್ಚಿದ ಆತಂಕ

ಕೇರಳ ರೈಲು ನಿಲ್ದಾಣದಲ್ಲಿ 100 ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದ ಮಹಿಳೆ ಪೊಲೀಸ್​ ವಶಕ್ಕೆ, ಹೆಚ್ಚಿದ ಆತಂಕ
ಪತ್ತೆಯಾಗಿರುವ ಸ್ಫೋಟಕಗಳು

ಮುಂದಿನ ಎಪ್ರಿಲ್-ಮೇ ತಿಂಗಳಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದ್ದು ಎಲ್ಲ ಬಗೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

guruganesh bhat

| Edited By: sadhu srinath

Feb 26, 2021 | 11:40 AM


ಕೋಯಿಕ್ಕೋಡ್: ಕೇರಳದ ಪ್ರಮುಖ ರೈಲು ನಿಲ್ದಾಣಗಳಲ್ಲೊಂದಾದ ಕೋಯಿಕ್ಕೋಡ್ ರೈಲು ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸುಮಾರು 350 ಡಿಟೊನೇಟರ್​ಗಳನ್ನು ಸಾಗಿಸುತ್ತಿದ್ದ ಓರ್ವ ಮಹಿಳೆಯನ್ನು ರೈಲ್ವೆ ಭದ್ರತಾ ದಳದ (Railway Protection Force) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಮಹಿಳೆ ಚೆನ್ನೈ-ಮಂಗಳೂರು ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ತಿಳಿದುಬಂದಿದೆ. ವಶಕ್ಕೆ ತೆಗೆದುಕೊಂಡಿರುವ ಮಹಿಳೆಯನ್ನು ತಮಿಳುನಾಡು ಮೂಲದ ರಮಣಿ ಎಂದು ಗುರುತಿಸಲಾಗಿದೆ ಎಂದು ಎನ್​ಡಿಟಿವಿ ಜಾಲತಾಣ ವರದಿ ಮಾಡಿದ್ದು, ಸ್ಫೋಟಕಗಳನ್ನು ಸೀಟ್​ನ ಕೆಳಗೆ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದಳು. ಬಂಧಿತ ರಮಣಿ ಬಾವಿಗಳನ್ನು ತೆಗೆಯಲು ಸ್ಫೋಟಕಗಳನ್ನು ಸಾಗಿಸುತ್ತಿದ್ದುದ್ದಾಗಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೂ, ಮುಂದಿನ ಎಪ್ರಿಲ್-ಮೇ ತಿಂಗಳಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದ್ದು ಎಲ್ಲ ಬಗೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಕರ್ನಾಟಕದ ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಗಳಲ್ಲಿ ಜಿಲೆಟಿನ್ ಕಡ್ಡಿಗಳಿಂದ ನಡೆದ ಸ್ಫೋಟದ ಬೆನ್ನಲ್ಲೇ ಅಪಾರ ಪ್ರಮಾಣದಲ್ಲಿ ಜೆಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಏನಿದು ಚಿಕ್ಕಬಳ್ಳಾಪುರ ಸ್ಫೋಟ?

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಸ್ಫೋಟ ನಡೆದು  ದುರಂತದಲ್ಲಿ ಆರು ಜನ ಮೃತಪಟ್ಟಿದ್ದರು. ಹಾಗೂ ಟಾಟಾ ಏಸ್ ವಾಹನ ಚಾಲಕ ರಿಯಾಜ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲಿ ಇಂತಹದೊಂದು ದುರಂತ ಸಂಭವಿಸಿತ್ತು. ಹಾಗೂ ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿತ್ತು.

ಚಿಕ್ಕಬಳ್ಳಾಪುರ ಸ್ಫೋಟದಲ್ಲಿ ಬದುಕುಳಿದವರು ಹೇಳಿದ್ದು..
ಈ ಘಟನೆಯಲ್ಲಿ ಗಾಯಗೊಂಡು ಬದುಕುಳಿದಿರುವ ರಿಯಾಜ್ ಟಿವಿ9ಗೆ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ರಾತ್ರಿ 12.45ರ ಸಮಯದಲ್ಲಿ ಸ್ಫೋಟ ಸಂಭವಿಸಿತ್ತು. ಭ್ರಮರವರ್ಷಿಣಿ ಕ್ವಾರಿ ಬ್ಲಾಸ್ಟಿಂಗ್​ಗೆ ಅಕ್ರಮವಾಗಿ ಸ್ಫೋಟಕ ಸಂಗ್ರಹ ಮಾಡಲಾಗಿತ್ತು. ಪೊಲೀಸರು ದಾಳಿ ನಡೆಸಿದ್ದ ಹಿನ್ನೆಲೆ ಸ್ಫೋಟಕವನ್ನು ಅರಣ್ಯದಲ್ಲಿ ಬಚ್ಚಿಡಲಾಗಿತ್ತು. ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ಘಟನೆ ನಡೆದಿದೆ. ರಾತ್ರಿ 12 ಗಂಟೆಗೆ ಟಾಟಾ ಏಸ್​ ಹತ್ತಲು ಹೇಳಿದ್ರು. ಆದ್ರೆ ಟಾಟಾ ಏಸ್​ನಲ್ಲಿ ಏನಿತ್ತು ಎಂದು ನನಗೆ ಗೊತ್ತಿಲ್ಲ.

ಬಾಕ್ಸ್, ಬ್ಯಾಗ್​ಗಳನ್ನ ತೆಗೆದುಕೊಂಡು ಐವರು ಅರಣ್ಯದೊಳಗೆ ಹೋದ್ರು. ನಾನು ಗಾಡಿಯಲ್ಲಿ ಕುಳಿತಿದ್ದಾಗ ಸ್ಫೋಟ ಸಂಭವಿಸಿತು. ಅರಣ್ಯದೊಳಗೆ ಹೋದ 5 ಜನ ಏನಾದರೋ ಗೊತ್ತಿಲ್ಲ. ನನಗೆ ಸಂಪೂರ್ಣ ಸುಟ್ಟ ಹಾಗೂ ರಕ್ತದ ಗಾಯಗಳಾಗಿವೆ. ಆ ಮೇಲೆ 108 ಆಂಬುಲೆನ್ಸ್ ಸಿಬ್ಬಂದಿ ಬಂದು ನನಗೆ ಪ್ರಥಮ ಚಿಕಿತ್ಸೆ ಕೊಟ್ರು ಎಂದು ರಿಯಾಜ್ ಹೇಳಿದ್ದರು.  ಸ್ಫೋಟದಲ್ಲಿ ಮೃತಪಟ್ಟ ಐವರ ಪೈಕಿ ನಾಲ್ವರ ಮಾಹಿತಿ ಲಭ್ಯವಾಗಿದ್ದು ಕಂಪ್ಯೂಟರ್ ಆಪರೇಟರ್​ಗಳಾದ ರಾಮು, ಗಂಗಾಧರ್, ಇಂಜಿನಿಯರ್ ಉಮಾಕಾಂತ್, ಸ್ಥಳೀಯ ರಾಮು ಎಂದು ಗುರುತು ಪತ್ತೆಯಾಗಿತ್ತು.

ಜಿಲೆಟಿನ್ ಸ್ಫೋಟದಿಂದ ಭೂಮಿ ಕಂಪಿಸಿದ ಅನುಭವ ಉಂಟಾಗಿ ಭೂಕಂಪ ಎಂದು ಭಾವಿಸಿ ಜನ ಮನೆಯಿಂದ ಹೊರ ಬಂದಿದ್ದಾರೆ. ನಂತರ ಜಿಲೆಟಿನ್ ಸ್ಫೋಟ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹಿರೇನಾಗವೇಲಿ ಗ್ರಾಮಸ್ಥರು ಕ್ವಾರಿ ಸ್ಥಳಕ್ಕೆ ದೌಡಾಯಿಸಿದ್ದರು. 2008ರಿಂದಲೂ ಜಿಲೆಟಿನ್ ಸ್ಫೋಟದಿಂದ ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಬಗ್ಗೆ ಗ್ರಾಮಸ್ಥರು ಆತಂಕದಿಂದಲೇ ಮಾಹಿತಿ ಬಿಚ್ಚಿಟ್ಟಿದ್ದರು. ಸ್ಫೋಟದ ಸದ್ದಿಗೆ ಗ್ರಾಮಸ್ಥರು ರಾತ್ರಿಯಿಡೀ ನಿದ್ದೆ ಮಾಡದೆ ಆತಂಕದಲ್ಲಿ ಕಾಲ ಕಳೆದಿದ್ದರು.

ಇನ್ನೂ ಓದಿ: ಚಿಕ್ಕಬಳ್ಳಾಪುರ ಕ್ವಾರಿ ಸ್ಫೋಟ ಪ್ರಕರಣದ ತನಿಖೆ CID ಹೆಗಲಿಗೆ: ವರದಿ ಬಂದ 24 ಗಂಟೆಯಲ್ಲಿ ಕ್ರಮ -ಬಸವರಾಜ ಬೊಮ್ಮಾಯಿ

Shivamogga Blast ಶಿವಮೊಗ್ಗದ ಹುಣಸೋಡಿಯಲ್ಲಿನ ವಿಸ್ಫೋಟಕ್ಕೆ ಇದು ಕಾರಣವಾಗಿರಬಹುದಾ?


Follow us on

Related Stories

Most Read Stories

Click on your DTH Provider to Add TV9 Kannada