Shivamogga Blast ಶಿವಮೊಗ್ಗದ ಹುಣಸೋಡಿಯಲ್ಲಿನ ವಿಸ್ಫೋಟಕ್ಕೆ ಇದು ಕಾರಣವಾಗಿರಬಹುದಾ?
ಮಾಧ್ಯಮಗಳ ಗಮನ ಬೇರೆ ವಿಚಾರಕ್ಕೆ ಹೋಗುತ್ತಿದ್ದಂತೆ ಇಂಥ ಅವಘಡಗಳ ತನಿಖೆ ಹಳ್ಳ ಹಿಡಿಯುವುದು ಹೊಸದೇನಲ್ಲ. ಶಿವಮೊಗ್ಗದ ಬಳಿ ಆಗಿರುವ ವಿಸ್ಫೋಟಕ್ಕೆ ಕಾರಣಕರ್ತರಾದವರನ್ನು ಹಿಡಿಯಬೇಕು ಮತ್ತು ಇಂಥವರಿಗೆ ಶಿಕ್ಷೆ ನೀಡಬೇಕು. ಆಗ ಒಂದು ಸಂದೇಶ ಹೋಗಲು ಸಾಧ್ಯ. ಆ ಕೆಲಸ ಈ ಸರ್ಕಾರದಿಂದ ಸಾಧ್ಯವೇ?
ಶಿವಮೊಗ್ಗಕ್ಕೆ ಹತ್ತಿರದಲ್ಲಿರುವ ಹುಣಸೋಡಿಯಲ್ಲಿ ನಡೆದ ವಿಸ್ಫೋಟದಿಂದ ಶಿವಮೊಗ್ಗದ ಜನರೇನು, ಇಡೀ ಕರ್ನಾಟಕದ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರೋರಾತ್ರಿ ರಾಷ್ಟ್ರಮಟ್ಟದಲ್ಲಿಯೂ ಸುದ್ದಿ ಮಾಡಿದೆ. ರಾತ್ರಿ 10.20 ಕ್ಕೆ ನಡೆದ ಈ ದುರ್ಘಟನೆಗೆ ಭೂಕಂಪವೇ ಕಾರಣವಿರಬೇಕು ಎಂದು ಎಲ್ಲರೂ ನಂಬಿದ್ದರು. ಆದರೆ, ಮಂಗಳೂರಿನಲ್ಲಿರುವ ಭೂಕಂಪ ಮಾಪನ ಕೇಂದ್ರದ ಹೇಳಿಕೆ ಹೊರಬಿದ್ದ ಮೇಲೆ ನಿನ್ನೆಯ ಘಟನೆಗೆ ಭೂಕಂಪ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ.
ಭೂಕಂಪ ಸಂಭವಿಸಿದೆ ಅನ್ನೋದಕ್ಕೆ ಯಾವುದೇ ಸಾಕ್ಷ ಇಲ್ಲ ಎಂದು ಹೇಳುತ್ತಲೇ ಮಂಗಳೂರಿನಲ್ಲಿರುವ ಭೂಕಂಪ ಮಾಪನ ಕೇಂದ್ರ ಇನ್ನೊಂದು ವಿಚಾರವನ್ನೂ ಹೊರಹಾಕಿದೆ. ಭೂಮಿಯ ಮೇಲ್ಮಟ್ಟದಲ್ಲಿ ಆಳವಾದ ಕುಳಿ ತೋಡಿ ಅಲ್ಲಿ ಇಟ್ಟ ವಸ್ತುವಿನಿಂದ ಸ್ಪೋಟಗೊಂಡರೆ, ಆ ಸ್ಪೋಟದಿಂದ ಭೂಮಿ ಕಂಪಿಸುವುದು ಭೂಕಂಪ ಮಾಪನ ಕೇಂದ್ರದಲ್ಲಿ ದಾಖಲೆಯಾಗಲ್ಲ ಎಂಬ ಹೇಳಿಕೆ ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಟಿವಿ9 ಡಿಜಿಟಲ್ ಕನ್ನಡ ಜೊತೆ ಮಾತನಾಡಿದ ಬಿಜೆಪಿ ಎಮ್ಎಲ್ಸಿ ಆಯನೂರು ಮಂಜುನಾಥ್ ಕೆಲವು ಹೊಸ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರು ಹೇಳಿದ ಪ್ರಮುಖ ಅಂಶಗಳು ಹೀಗಿವೆ:
ಶಿವಮೊಗ್ಗದ ಸುತ್ತಮುತ್ತ ಸುಮಾರು 150 ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕಾ ಸೈಟ್ಗಳಿವೆ. ಇವು ಭ್ರಷ್ಟರ ಕೂಪಗಳು. ಕಾರ್ಮಿಕ, ಗಣಿ, ಕಂದಾಯ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುತ್ತಾರೆ. ಈ ಕಳ್ಳ ದಂಧೆ ನಡೆಸುವವರು ಸರ್ವ ಪಕ್ಷಗಳ (all party) ಪ್ರತಿನಿಧಿಗಳಾಗಿರುತ್ತಾರೆ.
ಹಾಗಾಗಿ, ಇವರು ಮಾಡುವ ಎಲ್ಲಾ ರೀತಿಯ ಅಕ್ರಮಗಳು ಹೊರಜಗತ್ತಿಗೆ ಕಾಣದೇ ಮುಚ್ಚಿಹೋಗಿರುತ್ತವೆ. ಯಾಕೆಂದರೆ, ಈ ಕ್ವಾರಿ ಅಥವಾ ಗಣಿಗಳು ಕಂದಾಯ ಅಥವಾ ಅರಣ್ಯದಲ್ಲಿ ಇರುತ್ತವೆ. ಅಲ್ಲಿ, ಗಣಿಗಾರಿಕೆ ಮಾಡಲು ಸಾಮಾನ್ಯವಾಗಿ ಅನುಮತಿ ಸಿಕ್ಕಿರುವುದಿಲ್ಲ. ಇದನ್ನು ಮೀರಿ, ಅಧಿಕಾರಿಗಳ ಕೈ ಬಿಸಿ ಮಾಡಿ ಈ ದಂಧೆ ನಡೆಸುತ್ತಾರೆ.
ಈಗ್ಗೆ ಐದು ತಿಂಗಳುಗಳ ಹಿಂದೆ ಶಿವಮೊಗ್ಗದಲ್ಲಿರುವ ತುಂಗಾನಗರ ಪೊಲೀಸ್ ಸ್ಟೇಶನ್ನಲ್ಲಿ ಇಂಥ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಒಂದು ಪ್ರಕರಣ ವರದಿಯಾಗಿತ್ತು. ನನ್ನ ಅನುಮಾನವೇನೆಂದರೆ, ಆ ದಿನ ವರದಿಯಾದ ಪ್ರಕರಣದ ಹಿಂದೆ ಇದ್ದವರನ್ನು ಹೆಡೆಮುರಿ ಕಟ್ಟಿ ಹಿಡಿದಿದ್ದರೆ ಪ್ರಾಯಶಃ ಈಗ ದುರ್ಘಟನೆ ನಡೆಯುತ್ತಿರಲಿಲ್ಲ. ಆ ದಿನ ಪೊಲೀಸರು ಏನು ಮಾಡಿದ್ದಾರೆಂದರೆ, ಜಿಲೆಟಿನ್ ಕಡ್ಡಿಗಳನ್ನು ತೆಗೆದುಕೊಂಡು ಹೋಗುವವರನ್ನು ಬಿಟ್ಟು, ತಮಗೆ ಪೊದೆಯಲ್ಲಿ ಜಿಲೆಟಿನ್ ಕಡ್ಡಿ ಸಿಕ್ಕಿತೆಂದು ಹೇಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣವನ್ನು ಈಗ ಪುನರ್ ಪರಿಶೀಲಿಸಬೇಕು.
ಶಿವಮೊಗ್ಗ ಸುತ್ತ ಮುತ್ತ ತುಂಬಾ ಬಡಾವಣೆಗಳು ಬರುತ್ತಿವೆ. ಇಲ್ಲಿನ ನೆಲದಲ್ಲಿ ತುಂಬಾ ಕಲ್ಲುಗಳಿರುವುದರಿಂದ, ಅವನ್ನು ತೆಗೆಯಲು ಜಿಲೆಟಿನ್ ಕಡ್ಡಿ ಬಳಸಿ ಸ್ಪೋಟ ಮಾಡುವುದು ಹೊಸದೇನಲ್ಲ. ಇಲ್ಲಿ ಜಿಲೆಟಿನ್ ಕಡ್ಡಿಗಳು ಎಲ್ಲ ಕಡೆ ಸಿಗುತ್ತವೆ. ಇದು ದುಃಖ ತರುವ ಬೆಳವಣಿಗೆ. ಇದಕ್ಕೆ ಕಡಿವಾಣ ಹಾಕಬೇಕಿತ್ತು.
ಗೃಹ ಇಲಾಖೆ ಮೂಲಗಳು ಹೇಳುವುದೇನು? ಜಿಲೆಟಿನ್ ಕಡ್ಡಿಗಳು ಅಥವಾ ವಿಸ್ಫೋಟಕ ವಸ್ತುಗಳನ್ನು ಲಾರಿಯಲ್ಲಿ ತುಂಬಿ ಮೇಲಿಂದ ಗ್ರಾನೈಟ್ ಇಟ್ಟುಕೊಂಡು ಸಾಗಿಸುತ್ತಿರುವ ಪ್ರಾಥಮಿಕ ಮಾಹಿತಿ ಇದೆ. ಹೊರ ಜಗತ್ತಿಗೆ ಲಾರಿಯಲ್ಲಿ ಗ್ರಾನೈಟ್ ಸಾಗಿಸಲಾಗುತ್ತಿದೆ ಎಂದು ಕಂಡುಬಂದರೂ.. ಅಸಲಿಗೆ ಒಳಗೆ ಅದು ವಿಸ್ಫೋಟಕ ವಸ್ತು ಸಾಗಿಸುತ್ತಿತ್ತು ಎನ್ನಲಾಗಿದೆ. ವಿಸ್ಫೋಟಕಗಳ ಮೇಲೆ ಮುಚ್ಚಲಾಗಿದ್ದ ಗ್ರಾನೈಟ್ಗಳ ಒತ್ತಡ ಮತ್ತು ಒಳಗೆ ಬಿಸಿಯೇರಿ ಈ ವಿಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ. ಆದರೆ, ಇದು ಪ್ರಾಥಮಿಕ ಅಂಶವೇ ಹೊರತು, ಇದನ್ನು ಪ್ರಮಾಣೀಕರಿಸಿದ ಮಾಹಿತಿ ಎಂದು ತೆಗೆದುಕೊಳ್ಳಲು ಆಗುವುದಿಲ್ಲ.
ಪಶ್ಚಿಮ ಘಟ್ಟ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜೀವವೈವಿಧ್ಯ ಪ್ರಾಧಿಕಾರದ ಅಧ್ಯಕ್ಷ, ಅನಂತ ಹೆಗಡೆ ಅಶೀಸರ ಹೇಳುವುದೇನೆಂದರೆ ಪ್ರಕರಣವನ್ನು ಸಂಪೂರ್ಣವಾಗಿ ಆಧ್ಯಯನ ಮಾಡಬೇಕಿದೆ. ವಿಸ್ಫೋಟ ಅರಣ್ಯ ಪ್ರದೇಶದಲ್ಲಿ ನಡೆದಿದೆಯಾ? ಅಥವಾ ಕಂದಾಯ ಪ್ರದೇಶದಲ್ಲಿ ನಡೆದಿದೆಯಾ ಎನ್ನವ ಮಾಹಿತಿ ನನ್ನ ಬಳಿ ಇಲ್ಲ. ಆದರೆ, ಒಂದು ಮಾತನ್ನು ಹೇಳಬಹುದು. ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಹೇಳುವುದೇನು?
ಸ್ಪೋಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವನ್ನು ಟಿವಿ9 ಡಿಜಿಟಲ್ ಕನ್ನಡ ಸಂಪರ್ಕಿಸಿದಾಗ ಅವರು ಭೂಕಂಪನದ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಭೂಮಿ ನಡುಗಿದ ಅನುಭವ ಆಗಿದೆ. ಅಂದರೆ ಅಲ್ಲಿ ಭಾರೀ ಪ್ರಮಾಣದ ಸ್ಫೋಟ ಆಗಿರಬಹುದು. ಆದರೆ, ಇದು ನೈಸರ್ಗಿಕವಾಗಿ ಆಗಿರುವ ಭೂಕಂಪವಂತೂ ಅಲ್ಲ. ಇದು ತುಂಬಾ ಮೇಲ್ಪದರದಲ್ಲಿ ಆಗಿರುವ ಸ್ಫೋಟವಾಗಿದ್ದು, ಅದರ ಪರಿಣಾಮ ಅಥವಾ ತೀವ್ರತೆಯನ್ನು ಭೂಕಂಪಕ್ಕೆ ಹೋಲಿಸಿ ಹೇಳುವುದೂ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Shivamogga Blast ಶಿವಮೊಗ್ಗದ ಆಸುಪಾಸಿನಲ್ಲಿ ಭೂಕಂಪನ ದಾಖಲಾಗಿಲ್ಲ ಎಂದು ಹೇಳುತ್ತಿವೆ ವರದಿಗಳು