SSLC ಮಕ್ಕಳಿಗೆ ವರದಾನ.. ಮಕ್ಕಳಿಗೆ ಗಣಿತ ಕಲಿಸಲು ಮಾಯದಂತಹ ಕ್ಯಾಲೆಂಡರ್ ತಯಾರಿಸಿದ ಶಿಕ್ಷಕ!
ಈ ಕ್ಯಾಲೆಂಡರ್ ಇಟ್ಟುಕೊಂಡು ನಿತ್ಯ ಅಭ್ಯಾಸ ಮಾಡಿದರೆ, 45 ರಿಂದ 70 ವರೆಗೆ ಅಂಕಗಳನ್ನು ಗಳಿಸಲು ಸಾಧ್ಯ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವೀಡಿಯೊ ಮೂಲಕ ಪಾಠಗಳನ್ನು ಕಲಿಯಬಹುದು.

ಧಾರವಾಡ: ಕೊರೊನಾ ಹಾವಳಿಯಿಂದಾಗಿ ಶಾಲೆಗಳು ಬಂದ್ ಆಗಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಇದೀಗ ನಿಧಾನವಾಗಿ ಶಾಲೆಗಳು ಆರಂಭವಾದರೂ ಮುಂಚಿನಂತೆ ತರಗತಿಗಳು ನಡೆಯುತ್ತಿಲ್ಲ. ಇದು ನೇರವಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಮೊದಲಿನಂತೆ ಶಾಲೆಗಳು ಆರಂಭವಾಗಿ, ತರಗತಿಗಳು ನಡೆಯಲು ಇನ್ನೂ ಎಷ್ಟು ದಿನಗಳು ಬೇಕೋ ಗೊತ್ತಿಲ್ಲ.
ಆದರೆ, ಈ ಮಧ್ಯೆ ಕೊರೊನಾ ಸಂದರ್ಭದಲ್ಲಿ ಧಾರವಾಡದ ಶಿಕ್ಷಕರೊಬ್ಬರು ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅಂಕ ಗಳಿಕೆಗೆ ಸುಲಭವಾಗುವಂತಹ ಸರಳ ಗಣಿತ ಕ್ಯಾಲೆಂಡರ್ ಅಭಿವೃದ್ಧಿಪಡಿಸಿದ್ದಾರೆ. ಆ ಮೂಲಕ ಮಕ್ಕಳು ಮನೆಯಲ್ಲಿಯೇ ಕುಳಿತು, ಕ್ಯಾಲೆಂಡರ್ ಸಹಾಯದಿಂದ ಗಣಿತ ಪಠ್ಯವನ್ನು ಸುಲಭವಾಗಿ ಮುಗಿಸಬಹುದಾಗಿದೆ.
ಸರ್ಕಾರಿ ಶಾಲೆಯ ಶಿಕ್ಷಕ ಸಂತೋಷ ಹೆಗಡೆ ಅಭಿವೃದ್ಧಿಪಡಿಸಿದ ಕ್ಯಾಲೆಂಡರ್ ಕೊರೊನಾ ಹೊಡೆತದಿಂದಾಗಿ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳಿಗೆ ಅನುಕೂಲವಾಗುವಂತಹ ಗಣಿತ ಕ್ಯಾಲೆಂಡರ್ ಒಂದನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಸಂತೋಷ ಹೆಗಡೆ ಅಭಿವೃದ್ಧಿಪಡಿಸಿದ್ದಾರೆ. ಇದೀಗ ಪರೀಕ್ಷೆಗಳು ಹತ್ತಿರವೇ ಇರುವ ಸಂದರ್ಭದಲ್ಲಿ ಸಂತೋಷ ಹೆಗಡೆ ಸಿದ್ಧಪಡಿಸಿರುವ ಕ್ಯಾಲೆಂಡರ್ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ಈ ಕ್ಯಾಲೆಂಡರ್ ಮೂಲಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಗಣಿತವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವುದಲ್ಲದೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದೂ ಸಹಕಾರಿಯಾಗಲಿದೆ.
ಒಟ್ಟು 12 ಪುಟಗಳ ಈ ಕ್ಯಾಲೆಂಡರ್.. ಇದರಲ್ಲಿದೆ ಕ್ಯೂ ಆರ್ ಕೋಡ್ ಈ ಕ್ಯಾಲೆಂಡರ್ ಅಭಿವೃದ್ಧಿಪಡಿಸುವಾಗ ಸಂತೋಷ ಹೆಗಡೆ ಅವರು ಸಾಕಷ್ಟು ಅಂಶಗಳ ಬಗ್ಗೆ ಗಮನ ಹರಿಸಿದ್ದಾರೆ. ಕ್ಯಾಲೆಂಡರ್ ಒಟ್ಟು 12 ಪುಟಗಳನ್ನು ಹೊಂದಿದ್ದು, ಅದರಲ್ಲಿ 10ನೇ ತರಗತಿಯ ಗಣಿತ ಪಠ್ಯದಲ್ಲಿರುವ ಎಲ್ಲಾ ಪಾಠಗಳ ಸೂತ್ರಗಳು, ಲೆಕ್ಕಗಳು, ಪ್ರಮೇಯಗಳಿವೆ. ಅಷ್ಟೇ ಅಲ್ಲದೇ ರೇಖಾಗಣಿತದ ಚಿತ್ರಗಳೂ ಇವೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಪುಟದಲ್ಲೂ ಆಯಾ ಪಾಠಗಳಿಗೆ ಸಂಬಂಧಿಸಿದ ಕ್ಯೂಆರ್ ಕೋಡ್ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿರುವ ಗೂಗಲ್ ಲೆನ್ಸ್ ಮೂಲಕ ಇದನ್ನು ಸ್ಕ್ಯಾನ್ ಮಾಡಿ ವೀಡಿಯೊ ಪಾಠಗಳನ್ನು ನೋಡಬಹುದು. ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದ ಕೂಡಲೇ ವಿವರವಾದ ಮಾಹಿತಿಯೂ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲಕರವಾಗಿದೆ.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯಿಂದ ಮುದ್ರಣ
ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯಿಂದ ಈ ಕ್ಯಾಲೆಂಡರ್ ಮುದ್ರಿಸಲಾಗಿದ್ದು, ಶಾಲೆಗಳಿಗೆ ಉಚಿತವಾಗಿ ಹಂಚಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಶಾಲೆಗಳ ಗೋಡೆಗಳಲ್ಲಿ ಈ ಕ್ಯಾಲೆಂಡರ್ ನೇತಾಡುವುದನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಿಲ್ಲದಿದ್ದರೂ ಇದನ್ನು ಬಳಸಿಕೊಂಡು ಪಾಠ ಕಲಿಯಬಹುದಾಗಿದೆ.
ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕ ಸಂತೋಷ ಹೆಗಡೆ, ಈ ಕ್ಯಾಲೆಂಡರ್ ಇಟ್ಟುಕೊಂಡು ನಿತ್ಯ ಅಭ್ಯಾಸ ಮಾಡಿದರೆ, 45 ರಿಂದ 70 ವರೆಗೆ ಅಂಕಗಳನ್ನು ಗಳಿಸಲು ಸಾಧ್ಯ. ಅಲ್ಲದೇ ಈ ಪಾಠಗಳು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ (DSERT) ಸಂವೇದ ಕಾರ್ಯಕ್ರಮದ್ದಾಗಿವೆ. ಪ್ರತಿ ಪಾಠದ ಕುರಿತು 30 ನಿಮಿಷಗಳ ವೀಡಿಯೊ ಕೂಡ ಸಿಗಲಿದೆ ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಕೆ.ಎಸ್.ಜಯಂತ ಪ್ರತಿಕ್ರಿಯಿಸಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ವಿಭಿನ್ನ ಬಗೆಯ ಪ್ರಯೋಗವಿದು. ಇಂಥ ಹೊಸ ಬಗೆಯ ಪ್ರಯೋಗಗಳಿಗೆ ವೇದಿಕೆ ಕಲ್ಪಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಹೀಗಾಗಿ ಶಿಕ್ಷಕ ಸಂತೋಷ ಹೆಗಡೆ ಅವರ ಈ ಪ್ರಯತ್ನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ವಾಲ್‌ಕಾಮ್ ಎಂಬ ಕಂಪನಿಯ ಸಹಯೋಗದೊಂದಿಗೆ ಮುದ್ರಿಸಿ ಹಂಚಲಾಗುತ್ತಿದೆ.
ಸಮೀಪದ ಶಾಲೆಗಳಿಗೆ ನೇರವಾಗಿ ಕ್ಯಾಲೆಂಡರ್ ತಲುಪಿಸಿದರೆ, ದೂರದ ಶಾಲೆಗಳಿಗೆ ಇವುಗಳ ಪಿಡಿಎಫ್ ಪ್ರತಿಯನ್ನು ಮೊಬೈಲ್ ಮೂಲಕ ಕಳುಹಿಸಲಾಗುತ್ತಿದೆ. ಅಲ್ಲಿನ ಶಿಕ್ಷಕರು ಇದರ ಪ್ರತಿಗಳ ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ನೀಡಬಹುದು. ಅಲ್ಲದೇ ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು ಎನ್ನುತ್ತಾರೆ.
ಈಗಾಗಲೇ ಈ ಗಣಿತ ಕ್ಯಾಲೆಂಡರ್ ಪ್ರತಿಯನ್ನು ರಾಜ್ಯದ ಗಣಿತ ಶಿಕ್ಷಕರ ಗುಂಪಿನಲ್ಲಿಯೂ ಹಂಚಲಾಗಿದೆ. ಆ ಶಿಕ್ಷಕರು ಇದನ್ನು ತಮ್ಮ ತಮ್ಮ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಪ್ರಯತ್ನಕ್ಕೆ ಶಿಕ್ಷಕ ವಲಯ, ವಿದ್ಯಾರ್ಥಿ ವಲಯವಷ್ಟೇ ಅಲ್ಲದೇ ಪಾಲಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕೊರೊನಾ ಹೊಡೆತದಿಂದ ಶಾಲೆಗಳು ನಡೆಯದೇ ಪರದಾಡುತ್ತಿದ್ದ ವಿದ್ಯಾರ್ಥಿಗಳಿಗೆ ಈ ಕ್ಯಾಲೆಂಡರ್ ತುಸು ಸಮಾಧಾನ ನೀಡಿರುವುದಂತೂ ಸತ್ಯ.
ಕುಂಚ ಕೈಗೆತ್ತಿಕೊಂಡ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಮುಂದೆ ಮಾಡಿದ್ದೇನು ಗೊತ್ತಾ?
Published On - 5:33 pm, Fri, 22 January 21