
ದೆಹಲಿ: ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣವನ್ನು ವಿಶೇಷ ಪ್ರಕರಣಗಳಲ್ಲಿ ವಿಶೇಷವೆಂದು ಉಲ್ಲೇಖಿಸಿರುವ ದೆಹಲಿ ಕೋರ್ಟ್ ಅಪರಾಧಿ ಅರಿಜ್ ಖಾನ್ಗೆ ಗಲ್ಲುಶಿಕ್ಷೆ ವಿಧಿಸಿದೆ. 2008ರ ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ಅರಿಝ್ ಖಾನ್ ಅಪರಾಧಿಯಾಗಿ ಸಾಬೀತಾಗಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆಗೈದ ಆರೋಪ ಅರಿಜ್ ಖಾನ್ ಮೇಲಿತ್ತು. ಪೊಲೀಸರ ಪರ ವಕೀಲರ ‘ಆರೋಪಿಗೆ ಮರಣದಂಡಣೆ ವಿಧಿಸಬೇಕು’ ಎಂಬ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅರಿಜ್ ಖಾನ್ಗೆ ಮರಣದಂಡನೆ ವಿಧಿಸಿ ಆದೇಶ ನೀಡಿದೆ. ಈ ಹಿಂದೆಯೇ ಅರಿಜ್ ಖಾನ್ ತಪ್ಪಿತಸ್ಥ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಶಿಕ್ಷೆಯ ಪ್ರಮಾಣವನ್ನು ಇಂದು ಸಂಜೆ ಘೋಷಿಸುವುದಾಗಿ ತಿಳಿಸಿತ್ತು.
ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸದಸ್ಯನಾಗಿದ್ದ ಅರಿಜ್ ಖಾನ್ 2008ರಲ್ಲಿ ದೆಹಲಿಯಲ್ಲಿ ನಡೆದಿದ್ದ ಬಾಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಚಂದ್ರ ಶರ್ಮಾ ಅವರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯಲ್ಲಿ ಅರಿಜ್ ಖಾನ್ ಭಾಗಿಯಾಗಿರುವುದು ಸಾಬೀತಾಗಿತ್ತು. ಈ ಎನ್ಕೌಂಟರ್ಗೂ ಮುನ್ನ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ಘಟನೆಗಳು ಜರುಗಿದ್ದವು. ಮರಣ ದಂಡನೆಯ ಜತೆ ಅರಿಜ್ ಖಾನ್ಗೆ 11 ಲಕ್ಷ ದಂಡವನ್ನು ಸಹ ನ್ಯಾಯಾಧೀಶರು ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಅರಿಜ್ ಖಾನ್ ತಪ್ಪಿತಸ್ಥ ಎಂದು ನ್ಯಾಯಪೀಠಕ್ಕೆ ಮನವರಿಕೆಯಾಗಿದೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸಂದೀಪ್ ಯಾದವ್ ತೀರ್ಪಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣವನ್ನು ವಿಶೇಷ ಪ್ರಕರಣಗಳಲ್ಲಿ ವಿಶೇಷವಾದದ್ದು ಎಂದು ಪರಿಗಣಿಸಿರುವ ಕೋರ್ಟ್, ಸೆಕ್ಷನ್ 302ರ ಅಡಿ ಶಿಕ್ಷೆ ವಿಧಿಸುವುದಾಗಿ ತಿಳಿಸಿತ್ತು. ಸೆಕ್ಷನ್ 302ರಡಿ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶಗಳಿತ್ತು. ಇವೆರಡರ ಪೈಕಿ ನ್ಯಾಯಾಲಯ ಅಪರಾಧಿ ಎಂದು ಸಾಬೀತಾದ ಅರಿಜ್ ಖಾನ್ಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. 2013ರಲ್ಲಿ ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ಅರಿಜ್ ಖಾನ್ ಜತೆ ಶಹ್ಜಾದ್ ಎಂಬ ವ್ಯಕ್ತಿ ಪಾಲ್ಗೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯೆ
ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ಅರಿಜ್ ಖಾನ್ಗೆ ಮರಣ ದಂಡನೆ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಈ ತೀರ್ಪು ಭಯೋತ್ಪಾದಕರ ಬೆಂಬಲಿಗರ ಮನೋಭಾವವನ್ನು ಬಹಿರಂಗಪಡಿಸುತ್ತದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆಮ್ಆದ್ಮಿಯ ಅರವಿಂದ್ ಕೇಜ್ರಿವಾಲ್ ದೆಹಲಿಯ ಹುತಾತ್ಮ ಮತ್ತು ವೀರ ಪೊಲೀಸರ ಶೌರ್ಯವನ್ನು ಅನುಮಾನಿಸಿದ್ದರು. ಇದೀಗ ಅವರು ದೇಶದ ಜನರೆದುರು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಅರವಿಂದ್ ಕೇಜ್ರಿವಾಲ್ ವಿಪಕ್ಷ ನಾಯಕರನ್ನು ಟೀಕಿಸಿದ್ದಾರೆ.
बाटला हाउस केस में न्यायालय के निर्णय ने आज आतंकवादियों के समर्थकों का पर्दाफाश कर दिया है।
सोनिया गांधी, अरविंद केजरीवाल, ममता बनर्जी एवं अन्य सभी जिन्होंने हमारे बहादुर पुलिस कर्मियों की सत्यनिष्ठा पे सवाल उठाया था, आतंकियों का साथ दिया था,आज उन्हें देश से माफी मांगनी होगी।
— Prakash Javadekar (@PrakashJavdekar) March 15, 2021
ಇದನ್ನೂ ಓದಿ: ನ್ಯಾಯಾಲಯದ ಸಿಬ್ಬಂದಿ ವರ್ಗಕ್ಕೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡಬೇಕೆಂದು ಸುಪ್ರೀಂಗೆ ಅರ್ಜಿ: ಕೇಂದ್ರ ಸರ್ಕಾರ ವಿರೋಧ
ಇದನ್ನೂ ಓದಿ: ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತ ಬಿದ್ದರೆ ಚುನಾವಣೆ ರದ್ದು; ಕೇಂದ್ರ ಸರ್ಕಾರಕ್ಕೆ ಉತ್ತರಿಸಲು ತಿಳಿಸಿದ ಸುಪ್ರೀಂ
Published On - 7:17 pm, Mon, 15 March 21