ಮಧ್ಯಪ್ರದೇಶ (ಜಬಲ್ಪುರ): ಕ್ಷುಲ್ಲಕ ಕಾರಣಕ್ಕೆ ಬಾಲಕಿಯರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಇದರ ವೀಡಿಯೋ ವೈರಲ್ ಆಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಬಲ್ಪುರದ ಗಧಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಲ್ವರು ಯುವಕರು ರಾತ್ರಿ ವೇಳೆಯಲ್ಲಿ ಬಾಲಕಿಯ ಮನೆಯ ಎದುರು ವೇಗವಾಗಿ ಬೈಕ್ ಅನ್ನು ಓಡಿಸಿಕೊಂಡು ಹೋಗಿದ್ದರು. ಈ ವೇಳೆ ಬಾಲಕಿಯ ಮನೆಯ ನಾಯಿ ಜೋರಾಗಿ ಕೂಗಿದೆ. ನಾಯಿ ಜೋರಾಗಿ ಕೂಗುತ್ತಿದ್ದಂತೆ ಯುವಕರು ಗುಂಪು ನಾಯಿಗೆ ರಾಡ್ನಿಂದ ಹೊಡೆದಿದ್ದಾರೆ. ಅದೇ ಸಮಯಕ್ಕೆ ಬಾಲಕಿ ಮನೆಯಿಂದ ಹೊರಬಂದಿದ್ದಳು. ಈ ವೇಳೆ ದುಷ್ಕರ್ಮಿಗಳು ಆಕೆಯನ್ನು ನಿಂದಿಸಿ ಮಾತನಾಡಿದ್ದಾರೆ. ಮನೆಯ ಹೊರಗೆ ಗಲಾಟೆ ಕೇಳುತ್ತಿದ್ದಂತೆ ಬಾಲಕಿಯ ಇನ್ನಿಬ್ಬರು ಸಹೋದರಿಯರು ಹೊರಗೆ ಬಂದಿದ್ದರು. ಕೋಪಗೊಂಡ ಯುವಕರು ಬಾಲಕಿ ಹಾಗೂ ಆಕೆಯ ಸಹೋದರಿಯರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ಕುರಿತು ಬಾಲಕಿಯ ಚಿಕ್ಕಪ್ಪ ಮಾಹಿತಿ ನೀಡಿದ್ದಾರೆ.
ಬಳಿಕ ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಹಲ್ಲೆ ನಡೆಸಿದ ಆರೋಪಿಗಳನ್ನು ಪ್ರಿನ್ಸ್ ಶ್ರೀವಾಸ್ತವ್, ಮೋನು ಶ್ರೀವಾಸ್ತವ್, ಶಿಬು ದಹಿಯಾ ಹಾಗೂ ಬಬ್ಲು ಶ್ರೀವಾಸ್ತವ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಗಧಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಲ್ವರು ಆರೋಪಿಗಳು ಘಟನೆ ಬಳಿಕ ನಾಪತ್ತೆಯಾಗಿದ್ದು, ಅವರನ್ನು ಹುಡುಕಲು ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ. ಬಾಲಕಿಯನ್ನು ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:
ಹಾವು ಕಚ್ಚಿ ಅಪ್ಪ ಸಾವು: ತಂದೆಯ ಚಿತೆಗೆ ಮೂವರು ಪುತ್ರಿಯರಿಂದ ಅಗ್ನಿಸ್ಪರ್ಶ, ಅಂತಿಮ ಸಂಸ್ಕಾರ
ಬಿಪಿನ್ ರಾವತ್ ಮೃತಪಟ್ಟಿದ್ದಕ್ಕೆ ಸಂಭ್ರಮಾಚರಣೆ ವಿಚಾರ; ಮಂಗಳೂರಿನಲ್ಲಿ ಪ್ರಕರಣ ದಾಖಲು
Published On - 1:26 pm, Sat, 11 December 21