ತಮಿಳುನಾಡು:ತಮಿಳುನಾಡಿನಲ್ಲಿ ಮತ್ತೊಮ್ಮೆ ಪೊಲೀಸರು ಅಟ್ಟಹಾಸ ಮೆರೆದಿದ್ದಾರೆ. ಪೊಲೀಸಪ್ಪನ ಕ್ರೌರ್ಯಕ್ಕೆ ನೊಂದು ಯುವಕನೊಬ್ಬ ಸಜೀವ ದಹನವಾಗಿದ್ದಾನೆ. ಪೈಂಟರ್ ಒಬ್ಬ ಮನೆಯ ಬಾಡಿಗೆ ಪಾವತಿಸದ ಕಾರಣಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಆತನನ್ನು ಥಳಿಸಿದ್ದಾರೆ.ಇದರಿಂದ ತೀರ ಅವಮಾನಕೊಳಗಾದ ಪೈಂಟರ್ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನೆಡೆದಿದೆ.
ಚೆನ್ನೈನ ಪುಜಲ್ ನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಶ್ರೀನಿವಾಸನ್ ಲಾಕ್ಡೌನ್ ಪರಿಣಾಮ ಕೆಲಸವಿರಲಿಲ್ಲ, ಹೀಗಾಗಿ ನಾಲ್ಕು ತಿಂಗಳ ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನೆಯ ಯಜಮಾನ ರಾಜೇಂದ್ರನ್ ಮನೆಯನ್ನು ಖಾಲಿ ಮಾಡುವಂತೆ ಪದೇ ಪದೇ ಹೇಳುತ್ತಿದ್ದರು. ಜೊತೆಗೆ ರಾಜಕೀಯ ಪಕ್ಷದ ಸದಸ್ಯರಾಗಿರುವ ಮನೆ ಮಾಲೀಕ ಈ ವಿಷಯವಾಗಿ ಪುಜಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ಪುಜಲ್ ನಗರದ ಪೊಲೀಸ್ ಇನ್ಸ್‌ಪೆಕ್ಟರ್ ಸ್ಯಾಮ್ ಬೆನ್ಸನ್, ಶ್ರೀನಿವಾಸನ್ ಅವರ ಮನೆಗೆ ಬಂದು ಹೆಂಡತಿ ಮತ್ತು ಮಕ್ಕಳ ಮುಂದೆ ಶ್ರೀನಿವಾಸನ್ನನ್ನು ಮನಬಂದಂತೆ ಥಳಿಸಿದ್ದಾರೆ.ಇದರಿಂದ ತೀವ್ರ ನಿರಾಶೆಗೊಂಡ ಶ್ರೀನಿವಾಸನ್ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಸ್ಥಳೀಯರೆಲ್ಲ ಸೇರಿ ಬೆಂಕಿ ನಂದಿಸಿ ಶ್ರೀನಿವಾಸನ್ ಅವರನ್ನು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ 80 ರಷ್ಟು ಸುಟ್ಟ ಗಾಯಗಳಾಗಿದ್ದ ಶ್ರೀನಿವಾಸನ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಚೆನ್ನೈನ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅಗರ್‌ವಾಲ್ ಈ ಬಗ್ಗೆ ಹೇಳಿಕೆ ನೀಡಿದ್ದು, ಈಗಾಗಲೇ ಪುಜಲ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಸ್ಯಾಮ್ ಬೆನ್ಸನ್ ಅವರನ್ನು ಅಮಾನತು ಮಾಡಲಾಗಿದೆ.
Published On - 11:05 am, Tue, 4 August 20