Beating Retreat 2022: ಇಂದು ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪ; ಹೇಗಿರಲಿದೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ?

| Updated By: Lakshmi Hegde

Updated on: Jan 29, 2022 | 10:21 AM

ಭಾರತೀಯ ಭೂ ಸೇನೆ, ನೇವಿ, ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್​ ಪಡೆಗಳ 26 ಸಂಗೀತ ವಾದ್ಯ ಪ್ರದರ್ಶನಗಳು ನಡೆಯಲಿವೆ ಎಂದು ಶುಕ್ರವಾರ ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

Beating Retreat 2022: ಇಂದು ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪ; ಹೇಗಿರಲಿದೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ?
ಸಾಂಕೇತಿಕ ಚಿತ್ರ
Follow us on

ಇಂದು ದೆಹಲಿಯಲ್ಲಿ ಗಣರಾಜ್ಯೋತ್ಸವ (Republic Day 2022) ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಬೀಟಿಂಗ್​ ರಿಟ್ರೀಟ್(Beating Retreat 2022)​ ನಡೆಯಲಿದೆ. ಈ ಬಾರಿ ಜನವರಿ 23ರಂದು ನೇತಾಜಿ ಸುಭಾಷ್​ ಚಂದ್ರ ಬೋಸ್​​ರ ಜನ್ಮದಿನದಿಂದಲೇ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಶುರುವಾಗಿದ್ದವು. ಎಂದಿನಂತೆ ಜನವರಿ 26ರಂದು ರಾಜಪಥ್​​ನಲ್ಲಿ ರಾಷ್ಟ್ರಪತಿ ಧ್ವಜಾರೋಹಣ ನಡೆಸಿದ ಬಳಿಕ, ಪರೇಡ್​​ಗಳು, ಸೇನಾಶಕ್ತಿ ಪ್ರದರ್ಶನಗಳು ನಡೆದಿದ್ದವು. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಅಂದರೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಯೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ಹಾಗೇ, ಇಂದು ನಡೆಯಲಿರುವ ಬೀಟಿಂಗ್​ ರಿಟ್ರೀಟ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳ್ಳುವರು. ಅಂದಹಾಗೆ ಈ ಬೀಟಿಂಗ್​ ರಿಟ್ರೀಟ್ ಎಂಬ ಸಾಂಪ್ರಾದಾಯಿಕ ಸಮಾರೋಪ ಸಮಾರಂಭದ ಆಚರಣೆ ಕಳೆದ 70ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.  

1000 ಡ್ರೋನ್​​ಗಳಿಂದ ಲೈಟ್ ಶೋ
ಈ ಬಾರಿ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮಕ್ಕೆ 1000 ಡ್ರೋನ್​​ಗಳು ಮೆರುಗು ನೀಡಲಿವೆ. ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್​​ಗಳ ಹಾರಾಟ ನಡೆಯಲಿದೆ. ಸುಮಾರು 10 ನಿಮಿಷಗಳ ಕಾಲ ನಡೆಯಲಿರುವ ಡ್ರೋನ್​ ಹಾರಾಟ ಸಮಾರಂಭವನ್ನು ಭಾರತದ ನವೋದ್ಯಮವಾದ (ಸ್ಟಾರ್ಟ್​ಅಪ್​) ಬಾಟ್‌ಲ್ಯಾಬ್ ಡೈನಾಮಿಕ್ಸ್  ಆಯೋಜಿಸಿದೆ. ಹಾಗೇ, ಇದಕ್ಕೆ ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಐಐಟಿ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಡಿಪಾರ್ಟ್​ಮೆಂಟ್​​ನ ಸಹಯೋಗವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇನ್ನೊಂದು ಬಹುಮುಖ್ಯ ವಿಷಯವೆಂದರೆ,  1000 ಡ್ರೋನ್​ಗಳೆಲ್ಲವೂ ದೇಶೀಯವಾಗಿ ಅಭಿವೃದ್ಧಿಪಡಿಸಿದವೇ ಆಗಿವೆ. ಇವು ಹಾರಾಡುವ 10 ನಿಮಿಷಗಳ ಕಾಲ, ಅದಕ್ಕೆ ತಕ್ಕನಾದ ಸಂಗೀತ ಕೂಡ ನುಡಿಸಲಾಗುವುದು. ಸರ್ಕಾರದ 75 ಸಾಧನೆಗಳನ್ನು ಇವು ಲೈಟಿಂಗ್​ ಮೂಲಕ ಪ್ರದರ್ಶಿಸಲಿವೆ ಎಂದೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹಾಗೇ, ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮಕ್ಕೂ ಮುನ್ನ ಡ್ರೋನ್​ಗಳು ಪ್ರಾಯೋಗಿಕ ಹಾರಾಟ ಕೂಡ ನಡೆಸಿವೆ.

ಈ ಬಾರಿಯ ಬೀಟಿಂಗ್​ ದಿ ರಿಟ್ರೀಟ್​ ಸಮಾರಂಭದಲ್ಲಿ ಅದ್ಭುತ ಮಾರ್ಷಲ್​ ಮ್ಯೂಸಿಕ್  ಟ್ಯೂನ್​​ಗಳು ಇರಲಿದ್ದು, ಇವು ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗು ತರಲಿವೆ. ಭಾರತೀಯ ಭೂ ಸೇನೆ, ನೇವಿ, ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್​ ಪಡೆಗಳ 26 ಸಂಗೀತ ವಾದ್ಯ ಪ್ರದರ್ಶನಗಳು ನಡೆಯಲಿವೆ ಎಂದು ಶುಕ್ರವಾರ ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅದರಲ್ಲಿ ಮೊದಲ ಬ್ಯಾಂಡ್ ವೀರ್​ ಸೈನಿಕ್​ ಟ್ಯೂನ್ ಆಗಿದೆ. ಅಂದಹಾಗೆ, ಈ ಬಾರಿ ಮಹಾತ್ಮ ಗಾಂಧಿಯವರ ಅಚ್ಚುಮೆಚ್ಚಿನ ಗೀತೆಯಾಗಿದ್ದ ಅಬೈಡ್​ ವಿತ್​ ಮಿ ರಾಗವನ್ನು ಬೀಟಿಂಗ್​ ರಿಟ್ರೀಟ್​ ಸಮಾರಂಭದಿಂದ ಹೊರಗಿಡಲಾಗಿದೆ. ಒಟ್ಟು 26 ಟ್ಯೂನ್​​ಗಳನ್ನು ನಡೆಸಲಾಗುವುದು ಎಂದು ಹೇಳಲಾಗಿದ್ದರೂ, ಅದರಲ್ಲಿ ಅಬೈಡ್​ ವಿತ್​ ಮಿ ಕ್ರಿಶ್ಚಿಯನ್​ ಗೀತೆಯ ಉಲ್ಲೇಖವಿಲ್ಲ. ಅದರ ಬದಲು ಏ ಮೇರೆ ವತನ್​ ಕೋ ಲೋಗೋ ಗೀತೆ ಸೇರಿಸಲಾಗಿದೆ.

ಇವತ್ತು ದೆಹಲಿಯ ವಿಜಯ್​ ಚೌಕ್​​ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಬೀಟಿಂಗ್​ ರಿಟ್ರೀಟ್​​ಗಾಗಿ ಈಗಾಗಲೇ ದೆಹಲಿ ಪೊಲೀಸರು ಸಿದ್ಧತೆ ಮಾಡಿದ್ದಾರೆ. ಸಂಚಾರ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ವಿಜಯ್​ ಚೌಕ್​​ನಲ್ಲಿ ಸಾಮಾನ್ಯ ಜನ, ವಾಹನ ಸಂಚಾರ ಬಂದ್​ ಆಗಿದೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆ! ರಾತ್ರಿ 12 ಗಂಟೆಯಾದರೂ ಊಟ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು

Published On - 9:04 am, Sat, 29 January 22