ಭಾರತ್ ಬಂದ್: ಹಾಲು, ತರಕಾರಿನೂ ಸಿಗೋದಿಲ್ಲ ಎಂದು ಎಚ್ಚರಿಕೆ ಕೊಟ್ಟ ರೈತರು

ಕೇಂದ್ರದ ಮಾತುಕತೆಗೆ ಜಗ್ಗದ ರೈತರು ಡಿಸೆಂಬರ್ 8ರಂದು ಭಾರತ ಬಂದ್​ಗೆ ಕರೆನೀಡಿದ್ದಾರೆ. ಈ ವೇಳೆ ಅಗತ್ಯ ಸಾಮಾಗ್ರಿಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಬಹುದು ಎಂದಿದ್ದಾರೆ.

ಭಾರತ್ ಬಂದ್: ಹಾಲು, ತರಕಾರಿನೂ ಸಿಗೋದಿಲ್ಲ ಎಂದು ಎಚ್ಚರಿಕೆ ಕೊಟ್ಟ ರೈತರು
ಕೇಂದ್ರದ ಹೊಸ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನಾನಿರತ ರೈತರು
Edited By:

Updated on: Apr 07, 2022 | 5:34 PM

ದೆಹಲಿ: ಕೇಂದ್ರದ ಮಾತುಕತೆಗಳಿಗೆ ಜಗ್ಗದ ರೈತರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲೇ ಬೇಕು ಎಂದು ಪಟ್ಟುಹಿಡಿದು ಕುಳಿತಿದ್ದಾರೆ. ನಾಳೆ, ಡಿಸೆಂಬರ್ 8ರಂದು ಭಾರತ ಬಂದ್​ಗೆ ಕರೆನೀಡಿದ್ದಾರೆ. ಈ ವೇಳೆ ಅಗತ್ಯ ಸಾಮಾಗ್ರಿಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಬಹುದು ಎಂದು ರೈತ ಮುಖಂಡರು ಹೇಳಿದ್ದಾರೆ.

ರೈತರು ಬೀಡುಬಿಟ್ಟಿರುವ ದೆಹಲಿ ಮತ್ತು ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಬಂದ್ ಪರಿಣಾಮಕಾರಿಯಾಗಿ ಆಗಲಿದೆ. ದೆಹಲಿ, ಗಡಿ ಪ್ರದೇಶಗಳಲ್ಲಿ ಬಂದ್​ನಿಂದ ಹಲವು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.

ಎಡಪಕ್ಷಗಳು, ರೈತಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ರೈತರ ಪ್ರತಿಭಟನೆಯ ಕಾವು ದೇಶವ್ಯಾಪಿ ಹಬ್ಬುತ್ತಿದೆ. ಇತರ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯಲಿದ್ದು, ಬಂದ್ ಬಿಸಿ ಏರುವ ಸಾಧ್ಯತೆ ಇದೆ.

ದಿನನಿತ್ಯದ ಸೇವೆಗಳಲ್ಲೂ ವ್ಯತ್ಯಯ
ರೈತರಿಂದ ಒದಗುವ ಹಾಲು ಮತ್ತು ತರಕಾರಿ ಸೇವೆಯಲ್ಲೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ಸಾಮಾಗ್ರಿಗಳನ್ನು ಒಂದು ದಿನ ಮುಂಚಿತವಾಗಿಯೇ ಕೂಡಿಡುವಂತೆ ರೈತ ಮುಖಂಡರು ಸೂಚಿಸಿದ್ದಾರೆ.

 

ವೈದ್ಯಕೀಯ ಸೇವೆಗಳು ಎಂದಿನಂತೆ ಇರಲಿವೆ
ಅಗತ್ಯ ಮತ್ತು ತುರ್ತು ಸೇವೆಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದಿರುವ ರೈತರು ಮದುವೆಯಂಥ ಶುಭಕಾರ್ಯಗಳಿಗೆ ಬಂದ್​ನಿಂದ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ. ಆಸ್ಪತ್ರೆ, ಆಂಬುಲೆನ್ಸ್, ವೈದ್ಯಕೀಯ ಸೇವೆಗಳು ಎಂದಿನಂತೆ ಲಭ್ಯವಾಗಲಿವೆ.

ಸಾರಿಗೆ ಸೌಲಭ್ಯದಲ್ಲಿ ಸಮಸ್ಯೆ
ಇಂಡಿಯನ್ ಟೂರಿಸ್ಟ್ ಟ್ರಾನ್ಸ್​ಪೋರ್ಟರ್ಸ್ ಅಸೋಸಿಯೇಷನ್ (ITTA), ದೆಹಲಿ ಗೂಡ್ಸ್ ಟ್ರಾನ್ಸ್​ಪೋರ್ಟ್ ಅಸೋಸಿಯೇಷನ್, ದೆಹಲಿ ಟ್ಯಾಕ್ಸಿ ಟೂರಿಸ್ಟ್ ಟ್ರಾನ್ಸ್​ಪೋರ್ಟ್ಸ್ ಕೂಡ ಬಂದ್ ಬೆಂಬಲಿಸಿವೆ. ಹೀಗಾಗಿ ಎಲ್ಲಾ ವಿಧದ ಸಾರಿಗೆ ಸೇವೆಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ದೆಹಲಿ ಆಟೊ ರಿಕ್ಷಾ ಸಂಘ ಮತ್ತು ದೆಹಲಿ ಪ್ರದೇಶ ಟ್ಯಾಕ್ಸಿ ಯೂನಿಯನ್ ರೈತರಿಗೆ ನೈತಿಕ ಬೆಂಬ ಸೂಚಿಸುವುದಾಗಿ ತಿಳಿಸಿದ್ದು ಬಂದ್ ನಡೆಸುವುದಿಲ್ಲ ಎಂದಿದ್ದಾರೆ. ಕೊವಿಡ್ ಪರಿಣಾಮದಿಂದ ಆಟೊ ಚಾಲಕರು ಈಗಾಗಲೇ ಆರ್ಥಿಕವಾಗಿ ಕುಸಿತ ಕಂಡಿದ್ದಾರೆ. ಮತ್ತೆ ಬಂದ್ ನಡೆಸಿ ನಷ್ಟಮಾಡಿಕೊಳ್ಳುವುದು ಕಷ್ಟ ಎಂದಿದ್ದಾರೆ.

ಬ್ಯಾಂಕಿಂಗ್ ಸೇವೆಗಳು ಸಿಗಲಿವೆಯೇ?
ಕೆಲವಾರು ಬ್ಯಾಂಕಿಂಗ್ ಯೂನಿಯನ್​ಗಳೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವುದರಿಂದ, ಬ್ಯಾಂಕ್ ಸೇವೆಯಲ್ಲೂ ಅಡಚಣೆ ಉಂಟಾಗಬಹುದು.

Delhi Chaloಗೆ ಸಿಗುತ್ತಿದೆ ರಾಷ್ಟ್ರವ್ಯಾಪಿ ಬೆಂಬಲ: ಪಂಜಾಬ್​ ಕೃಷಿಕರಿಗೆ ದೊರೆಯಲಿದೆ ಕರುನಾಡ ರೈತರ ಬಲ

Published On - 1:23 pm, Mon, 7 December 20