Bhima Koregaon Case: ಭೀಮಾ ಕೊರೆಗಾಂವ್ ಪ್ರಕರಣ; ಆರೋಪಿ ವರವರ ರಾವ್​ಗೆ ಜಾಮೀನು ವಿಸ್ತರಣೆ

| Updated By: ಸುಷ್ಮಾ ಚಕ್ರೆ

Updated on: Jul 12, 2022 | 12:12 PM

ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಭೀಮಾ ಕೊರೆಗಾಂವ್ ಪ್ರಕರಣದ ಆರೋಪಿ ವರವರ ರಾವ್​ಗೆ ಜಾಮೀನು ನೀಡಲಾಗಿತ್ತು. ಮುಂದಿನ ಆದೇಶದವರೆಗೆ ಮಧ್ಯಂತರ ಜಾಮೀನು ಮುಂದುವರಿಕೆ ಮಾಡಲು ಸುಪ್ರೀಂಕೋರ್ಟ್​​ ಆದೇಶ ನೀಡಿದೆ.

Bhima Koregaon Case: ಭೀಮಾ ಕೊರೆಗಾಂವ್ ಪ್ರಕರಣ; ಆರೋಪಿ ವರವರ ರಾವ್​ಗೆ ಜಾಮೀನು ವಿಸ್ತರಣೆ
ಭೀಮಾ ಕೊರೆಗಾಂವ್ ಪ್ರಕರಣದ ಅರೋಪಿ ವರವರ ರಾವ್
Follow us on

ಮುಂಬೈ: ಭೀಮಾ ಕೋರೆಗಾಂವ್- ಎಲ್ಗಾರ್ ಪರಿಷತ್ ಪ್ರಕರಣಕ್ಕೆ (Bhima Koregaon case) ಸಂಬಂಧಿಸಿದಂತೆ ಪ್ರಮುಖ ಆರೋಪಿ ವರವರ ರಾವ್​ಗೆ (Varavara Rao) ಜಾಮೀನು ಮುಂದುವರಿಸಲಾಗಿದೆ. ಮುಂದಿನ ಆದೇಶದವರೆಗೆ ಮಧ್ಯಂತರ ಜಾಮೀನು ಮುಂದುವರಿಕೆ ಮಾಡಲು ಸುಪ್ರೀಂಕೋರ್ಟ್​​ (Supreme Court) ಆದೇಶ ನೀಡಿದೆ. ವೈದ್ಯಕೀಯ ಕಾರಣಗಳ ಆಧಾರದ ಮೇಲೆ ವರವರ ರಾವ್​ಗೆ ಜಾಮೀನು ನೀಡಲಾಗಿತ್ತು.

2018ರ ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಡಾ. ಪಿ. ವರವರ ರಾವ್ ವೈದ್ಯಕೀಯ ಕಾರಣಗಳಿಗಾಗಿ ಶಾಶ್ವತ ಜಾಮೀನು ಕೋರಿದ್ದರು. ಕವಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ವರವರ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಾಲಯವು ಜುಲೈ 19ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ಈ ವಿಚಾರದಲ್ಲಿ ಶಾಶ್ವತ ವೈದ್ಯಕೀಯ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್​ನ ಏಪ್ರಿಲ್ 13ರ ಆದೇಶವನ್ನು ವರವರ ರಾವ್ ಪ್ರಶ್ನಿಸಿದ್ದರು. ಆದರೆ, ನ್ಯಾಯಾಲಯವು ವರವರ ರಾವ್ ಅವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು, ತಲೋಜಾ ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಮೂರು ತಿಂಗಳ ಕಾಲಾವಕಾಶವನ್ನು ನೀಡಿತ್ತು.

ಇದನ್ನೂ ಓದಿ: Bhima Koregaon Case ಭೀಮಾ ಕೊರೆಗಾಂವ್- ಎಲ್ಗಾರ್ ಪರಿಷದ್ ಪ್ರಕರಣ: ವರವರ ರಾವ್​​ ಜಾಮೀನು ಅರ್ಜಿ ವಿಚಾರಣೆ ನಾಳೆ

2018ರ ಆಗಸ್ಟ್ 28ರಂದು ವರವರ ರಾವ್ ಅವರನ್ನು ಹೈದರಾಬಾದ್​ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿತ್ತು. ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು 2018ರ ಜನವರಿ 8ರಂದು ಐಪಿಸಿಯ ವಿವಿಧ ಸೆಕ್ಷನ್ ಮತ್ತು ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದರು. ಸುಪ್ರೀಕೋರ್ಟ್ ಆದೇಶದನ್ವಯ ವರವರ ರಾವ್ ಅವರನ್ನು ಮೊದಲಿಗೆ ಗೃಹ ಬಂಧನದಲ್ಲಿರಿಸಲಾಗಿತ್ತು. 2018ರ ನವೆಂಬರ್ 17ರಂದು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನಂತರ ತಲೋಜಾ ಜೈಲಿಗೆ ಹಾಕಲಾಗಿತ್ತು. 2021ರ ಫೆಬ್ರವರಿ 22ರಂದು ವೈದ್ಯಕೀಯ ಆಧಾರದ ಮೇಲೆ ಅವರಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

 

Published On - 12:00 pm, Tue, 12 July 22