ಹರಿಯಾಣದಲ್ಲಿ ಬಿಜೆಪಿಗೆ ದೊಡ್ಡ ಶಾಕ್; ಅಶೋಕ್ ತನ್ವಾರ್ ಕಾಂಗ್ರೆಸ್‌ಗೆ ಮರು ಸೇರ್ಪಡೆ

|

Updated on: Oct 03, 2024 | 4:24 PM

ಹರಿಯಾಣ ವಿಧಾನಸಭೆ ಚುನಾವಣೆಗೂ ಮೊದಲೇ ಬಿಜೆಪಿಗೆ ದೊಡ್ಡ ಆಘಾತ ಉಂಟಾಗಿದೆ. ಬಿಜೆಪಿ ನಾಯಕ ಅಶೋಕ್ ತನ್ವಾರ್ ಕಾಂಗ್ರೆಸ್​ಗೆ ಮರುಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ ಮತ್ತು ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.

ಹರಿಯಾಣದಲ್ಲಿ ಬಿಜೆಪಿಗೆ ದೊಡ್ಡ ಶಾಕ್; ಅಶೋಕ್ ತನ್ವಾರ್ ಕಾಂಗ್ರೆಸ್‌ಗೆ ಮರು ಸೇರ್ಪಡೆ
ಅಶೋಕ್ ತನ್ವಾರ್ ಕಾಂಗ್ರೆಸ್‌ಗೆ ಮರು ಸೇರ್ಪಡೆ
Follow us on

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಎರಡೇ ದಿನ ಬಾಕಿಯಿದೆ. ಚುನಾವಣೆಗೂ ಮೊದಲೇ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಭಾರೀ ಹಿನ್ನಡೆಯಾಗಿದ್ದು, ಬಿಜೆಪಿ ನಾಯಕ ಅಶೋಕ್ ತನ್ವಾರ್ ತಮ್ಮ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಮರಳಿದ್ದಾರೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಪಕ್ಷದ ಶಾಲು ನೀಡುವ ಮೂಲಕ ಅಶೋಕ್ ತನ್ವಾರ್ ಅವರನ್ನು ಪಕ್ಷಕ್ಕೆ ಮರಳಿ ಬರಮಾಡಿಕೊಂಡರು.

ಚುನಾವಣೆಯ ಅಂತಿಮ ಸಿದ್ಧತೆಯಲ್ಲಿರುವ ಬಿಜೆಪಿಗೆ ಶಾಕ್ ನೀಡಿರುವ ಅಶೋಕ್ ತನ್ವಾರ್ ನಾಟಕೀಯ ತಿರುವಿನಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಿನ್ನೆಯಷ್ಟೇ ಮಧ್ಯಾಹ್ನ 1.45 ಕ್ಕೆ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಅವರು ಆ ಬಗ್ಗೆ ಟ್ವೀಟ್ ಮಾಡಿದ್ದರು. ಇಂದು ಇದ್ದಕ್ಕಿದ್ದಂತೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇಂದು ಅಶೋಕ್ ತನ್ವಾರ್ ಅಧಿಕೃತವಾಗಿ ಕಾಂಗ್ರೆಸ್ ಗೆ ಮರು ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.


ಇದನ್ನೂ ಓದಿ: ಹರ್ಯಾಣದಲ್ಲಿ ಕಾಂಗ್ರೆಸ್ ರೈತರ ಭೂಮಿಯನ್ನು ಕಿತ್ತುಕೊಂಡಿದೆ: ರಾಜನಾಥ್ ಸಿಂಗ್

ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪ್ರಕಟಣೆಯನ್ನು ಹಂಚಿಕೊಂಡಿದ್ದು, ಅಶೋಕ್ ತನ್ವರ್ ಅವರನ್ನು ಸ್ವಾಗತಿಸಿದೆ. “ಕಾಂಗ್ರೆಸ್ ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತಿದೆ ಮತ್ತು ಸಂವಿಧಾನವನ್ನು ರಕ್ಷಿಸಲು ಶ್ರದ್ಧೆಯಿಂದ ಹೋರಾಡಿದೆ. ನಮ್ಮ ಬದ್ಧತೆ ಮತ್ತು ಸಮರ್ಪಣೆಯಿಂದ ಪ್ರೇರಿತರಾಗಿ, ಹಿರಿಯ ಬಿಜೆಪಿ ನಾಯಕ, ಮಾಜಿ ಸಂಸದ, ಬಿಜೆಪಿಯ ಹರಿಯಾಣ ಪ್ರಚಾರ ಸಮಿತಿಯ ಸದಸ್ಯ ಮತ್ತು ಸ್ಟಾರ್ ಪ್ರಚಾರಕ ಅಶೋಕ್ ತನ್ವಾರ್ ಅವರು ಕಾಂಗ್ರೆಸ್‌ಗೆ ಮರಳಿದ್ದಾರೆ. ಅವರಿಗೆ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ” ಎಂದು ಕಾಂಗ್ರೆಸ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ