
ಪಾಟ್ನಾ, ನವೆಂಬರ್ 6: ಭಾರೀ ನಿರೀಕ್ಷೆ ಮೂಡಿಸಿರುವ ಬಿಹಾರದ ವಿಧಾನಸಭಾ ಚುನಾವಣೆಯ (Bihar Assembly Elections) ಮೊದಲ ಹಂತದ ಮತದಾನ ಮುಗಿದಿದೆ. 243 ಸದಸ್ಯರ ಬಿಹಾರ ವಿಧಾನಸಭೆಗೆ ನಡೆದ 1ನೇ ಹಂತದ ಚುನಾವಣೆಯಲ್ಲಿ ಇಂದು ಶೇ. 64.46ರಷ್ಟು ಮತದಾನ ದಾಖಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ.
ಬಿಹಾರದ ಮಿನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ. 73.29) ಮತದಾನ ದಾಖಲಾಗಿದೆ. ಕುಮ್ರಾರ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ. 39.52) ಮತದಾನ ದಾಖಲಾಗಿದೆ. ಇಂದು ಬಿಹಾರದ 18 ಜಿಲ್ಲೆಗಳ 121 ವಿಧಾನಸಭಾ ಕ್ಷೇತ್ರಗಳಲ್ಲಿ 1,000ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು. ಅದರಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮುಂತಾದವರು ಪ್ರಮುಖರು. ಅವರೆಲ್ಲರ ಭವಿಷ್ಯ ಈಗಾಗಲೇ ಮತಯಂತ್ರ ಸೇರಿದೆ.
ಇದನ್ನೂ ಓದಿ: ಬಿಹಾರದ ಉಪಮುಖ್ಯಮಂತ್ರಿ ಕಾರಿನ ಮೇಲೆ ಚಪ್ಪಲಿ ಎಸೆದು, ಕಲ್ಲು ತೂರಾಟ
ಜಿಲ್ಲಾವಾರು ಅತಿ ಹೆಚ್ಚು ಮತದಾನ ಬೆಂಗುಸರೈನಲ್ಲಿ ದಾಖಲಾಗಿದ್ದು, ಅಲ್ಲಿ ಶೇ. 67.32ರಷ್ಟು ಮತದಾನ ದಾಖಲಾಗಿದೆ. ಶೇಖ್‌ಪುರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಬಿಹಾರದಲ್ಲಿ ನವೆಂಬರ್ 11ರಂದು ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ.
ಫೆಬ್ರವರಿ 2000ರಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶೇ. 62.57ರಷ್ಟು ಮತದಾನವನ್ನು ದಾಖಲಾಗಿತ್ತು. ಇದು ಇಲ್ಲಿಯವರೆಗೆ ಅತ್ಯಧಿಕ ಮತದಾನವಾಗಿತ್ತ. ಆದರೆ, ಈ ಬಾರಿ ಶೇ. 64.46ರಷ್ಟು ಮತದಾನ ನಡೆದಿರುವುದರಿಂದ ಇದು ಬಿಹಾರದಲ್ಲಿ ಇದುವರೆಗೂ ನಡೆದ ದಾಖಲೆಯ ಮತದಾನವಾಗಿದೆ.
ಬಿಹಾರದಲ್ಲಿ ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 14ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ