ಪಟನಾ: ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಕಾಂಕ್ಷಿ ಮೇಲೆ ಸರ್ಕಾರಿ ಅಧಿಕಾರಿ ಲಾಠಿ ಪ್ರಹಾರ, ವಿಡಿಯೊ ವೈರಲ್

ನೂರಾರು ಉದ್ಯೋಗಕಾಂಕ್ಷಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗುತ್ತಿದ್ದ ಯುವಕನ ಮೇಲೆ ಸರ್ಕಾರಿ ಅಧಿಕಾರಿಯೊಬ್ಬರು ಹಿಗ್ಗಾಮುಗ್ಗ ಲಾಠಿ ಪ್ರಹಾರ ಮಾಡುತ್ತಿರುವ ವಿಡಿಯೊ ವೈರಲ್

ಪಟನಾ: ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಕಾಂಕ್ಷಿ ಮೇಲೆ ಸರ್ಕಾರಿ ಅಧಿಕಾರಿ ಲಾಠಿ ಪ್ರಹಾರ, ವಿಡಿಯೊ ವೈರಲ್
ಸರ್ಕಾರಿ ಅಧಿಕಾರಿ ಲಾಠಿಯಿಂದ ಥಳಿಸುತ್ತಿರುವುದು
Edited By:

Updated on: Aug 22, 2022 | 8:23 PM

ಶಿಕ್ಷಕರ ನೇಮಕಾತಿ ವಿಳಂಬ ಪ್ರಶ್ನಿಸಿ ಬಿಹಾರದ ರಾಜಧಾನಿ ಪಟನಾದಲ್ಲಿ ಪ್ರತಿಭಟನೆ ನಡೆಯುತ್ತಿದ್ದೆ. ನೂರಾರು ಉದ್ಯೋಗಕಾಂಕ್ಷಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗುತ್ತಿದ್ದ ಯುವಕನ ಮೇಲೆ ಸರ್ಕಾರಿ ಅಧಿಕಾರಿಯೊಬ್ಬರು ಹಿಗ್ಗಾಮುಗ್ಗ ಲಾಠಿ ಪ್ರಹಾರ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಹೊಡೆತ ಬೀಳುವಾಗ ನೆಲದಲ್ಲಿ ಬಿದ್ದು ಕೈ ಅಡ್ಡ ಹಿಡಿಯುತ್ತಿರುವ ಯುವಕ, ಆತನ ಕೈಯಲ್ಲಿ ತಿರಂಗವೂ ಇದೆ. ಆಮೇಲೆ ಅಲ್ಲಿದ್ದ ಪೊಲೀಸ್ ಆತ ಕೈಯಿಂದ ರಾಷ್ಟ್ರಧ್ವಜವನ್ನು ಎಳೆದು ತೆಗೆಯುತ್ತಿರುವುದು ವಿಡಿಯೊದಲ್ಲಿದೆ. ಪಟನಾದ ದಾಕ್ ಬಂಗ್ಲಾ ಚೌರಾನ ಎಂಬಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ನೆಲದಲ್ಲಿ ಬಿದ್ದಿರುವ ಉದ್ಯೋಗಕಾಂಕ್ಷಿಗೆ ಲಾಠಿಯಿಂದ ಥಳಿಸುತ್ತಿರುವ ಸರ್ಕಾರಿ ಅಧಿಕಾರಿ ಪಟನಾದ ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ ಕೆಕೆ ಸಿಂಗ್ ಎಂದು ಗುರುತಿಸಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾದ್ದು, ಪ್ರತಿಭಟನಾಕಾರರನ್ನು ಚದುರಿಸಲು ಜಲ ಫಿರಂಗಿ ಪ್ರಯೋಗಿಸಿದ್ದಾರೆ.

2019ರಿಂದ ನೇಮಕಾತಿಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಭಟನಾನಿರತ ಅಭ್ಯರ್ಥಿಗಳು ತಿಳಿಸಿದರು.ಕಳೆದ 3 ವರ್ಷಗಳಿಂದ ಸರಕಾರದಿಂದ ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸರ್ಕಾರ ರಚನೆಗೂ ಮುನ್ನ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೊದಲ ಸಂಪುಟದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳುತ್ತಿದ್ದರು  ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ ಎಂದು ಮತ್ತೊಬ್ಬ ಪ್ರತಿಭಟನಾಕಾರ ಹೇಳಿದ್ದಾರೆ.

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ವಿಡಿಯೊ ನೋಡಿದ ನಂತರ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಡಿಎಂ ಅವರು ಪಾಟ್ನಾ ಸೆಂಟ್ರಲ್ ಎಸ್ಪಿ ಮತ್ತು ಡಿಡಿಸಿ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದ್ದಾರೆ.

ಏತನ್ಮಧ್ಯೆ, ಘಟನೆಯ ಬಗ್ಗೆ ಬಿಜೆಪಿ ಹೊಸದಾಗಿ ರಚನೆಯಾದ ಜೆಡಿಯು-ಆರ್ಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 20 ಲಕ್ಷ ಉದ್ಯೋಗ ಕೊಡುವು ದಾಗಿ ಮಾತನಾಡಿದ ನಿತೀಶ್ ಕುಮಾರ್ ಅವರ ಪೊಲೀಸರು ಪಾಟ್ನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಅಭ್ಯರ್ಥಿಯನ್ನು ಅಮಾನವೀಯವಾಗಿ ಥಳಿಸಿದ್ದಾರೆ. ಬಿಹಾರ ಸರ್ಕಾರ ಮತ್ತು ಅಧಿಕಾರಿಗಳು ಶಿಕ್ಷಕನ ಮುಖಕ್ಕೆ ರಕ್ತ ಹರಿಸಿದ್ದಲ್ಲದೇ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದು ಜೆಡಿಯು-ಆರ್‌ಜೆಡಿ ಸರ್ಕಾರದ ಅಸಲಿ ಮುಖ  ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

Published On - 7:08 pm, Mon, 22 August 22