ಬಿಹಾರದಲ್ಲಿ ಬೃಹತ್ ಸೇತುವೆ ಕುಸಿತ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದ ನಿತೀಶ್ ಕುಮಾರ್

|

Updated on: Jun 05, 2023 | 6:03 PM

2014ರಿಂದ ನಿರ್ಮಿಸಲಾಗುತ್ತಿರುವ 3.16 ಕಿಮೀ ಸೇತುವೆಯು 14 ತಿಂಗಳುಗಳಲ್ಲಿ ಎರಡು ಬಾರಿ ಕುಸಿದಿದೆ ಮೊದಲನೆಯದು ಭಾಗಲ್ಪುರದ ಸುಲ್ತಂಗಂಜ್ ಭಾಗದಲ್ಲಿ ಏಪ್ರಿಲ್ 2022 ರಂದು ಕುಸಿದರೆ ಎರಡನೇ ಬಾರಿಗೆ ಭಾನುವಾರ ಸಂಜೆ ಖಗಾರಿಯಾ ಭಾಗದಲ್ಲಿ ಕುಸಿದಿದೆ.ಈ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬಿಹಾರದಲ್ಲಿ ಬೃಹತ್ ಸೇತುವೆ ಕುಸಿತ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದ ನಿತೀಶ್ ಕುಮಾರ್
ನಿತೀಶ್ ಕುಮಾರ್
Follow us on

ಪಾಟ್ನಾ: ಬಿಹಾರದಲ್ಲಿ (Bihar) ಗಂಗಾ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆ ಕುಸಿದ ಘಟನೆಯ ಒಂದು ದಿನದ ನಂತರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾನುವಾರ ಕುಸಿದ ಸೇತುವೆ ಕಳೆದ ವರ್ಷವೂ ಕುಸಿದಿತ್ತು ಎಂದು ಅವರು ಹೇಳಿದರು.ಸೇತುವೆಯನ್ನು ಸರಿಯಾಗಿ ನಿರ್ಮಿಸಿಲ್ಲ. ಹಾಗಾಗಿಯೇ ಅದು ಏಪ್ರಿಲ್ 2022 ರಿಂದ ಇದು ಎರಡು ಬಾರಿ ಕುಸಿದಿದೆ. ಇದು ಗಂಭೀರ ವಿಷಯ. ಸಂಬಂಧಪಟ್ಟ ಇಲಾಖೆ ಈಗಾಗಲೇ ಅದರ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರ ಸಿಎಂ ಹೇಳಿದ್ದಾರೆ.

2014ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿ ಇದುವರೆಗೂ ಏಕೆ ಪೂರ್ಣಗೊಂಡಿಲ್ಲ? ಯಾಕೆ ಅದು ನಿಗದಿತ ಸಮಯಕ್ಕೆ ಪೂರ್ತಿಯಾಗಿಲ್ಲ?. ನಾನು ಈ ಬಗ್ಗೆಯೂ ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆಯನ್ನು ಕೇಳಿದ್ದೇನೆ. ಉಪಮುಖ್ಯಮಂತ್ರಿ ಕೂಡ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.

2014ರಿಂದ ನಿರ್ಮಿಸಲಾಗುತ್ತಿರುವ 3.16 ಕಿಮೀ ಸೇತುವೆಯು 14 ತಿಂಗಳುಗಳಲ್ಲಿ ಎರಡು ಬಾರಿ ಕುಸಿದಿದೆ.ಮೊದಲನೆಯದು ಭಾಗಲ್ಪುರದ ಸುಲ್ತಂಗಂಜ್ ಭಾಗದಲ್ಲಿ ಏಪ್ರಿಲ್ 2022 ರಂದು ಕುಸಿದರೆ ಎರಡನೇ ಬಾರಿಗೆ ಭಾನುವಾರ ಸಂಜೆ ಖಗಾರಿಯಾ ಭಾಗದಲ್ಲಿ ಕುಸಿದಿದೆ. ಈ ಘಟನೆಯು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ನಂತರ ರಸ್ತೆ ನಿರ್ಮಾಣ ಇಲಾಖೆಯ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾನುವಾರ, ರಚನಾತ್ಮಕ ದೋಷಗಳಿಂದಾಗಿ ನಿರ್ಮಾಣ ಹಂತದಲ್ಲಿರುವ ಸೇತುವೆಯನ್ನು ಕೆಡವಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದರು. ಕಳೆದ ವರ್ಷ ಏಪ್ರಿಲ್ 30 ರಂದು ಈ ಸೇತುವೆಯ ಒಂದು ಭಾಗವು ಕುಸಿದಿದೆ, ನಾವು ಅದರ ನಂತರ, ನಿರ್ಮಾಣ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿರುವ ಐಐಟಿ-ರೂರ್ಕಿಯನ್ನು ಅಧ್ಯಯನ ಮಾಡಲು ಸಂಪರ್ಕಿಸಿದ್ದೇವೆ. ಅವರ ಅಂತಿಮ ವರದಿ ಇನ್ನು ಬರಬೇಕಿದೆ. ಆದರೆ ರಚನೆಯನ್ನು ಅಧ್ಯಯನ ಮಾಡಿದ ತಜ್ಞರು ಗಂಭೀರ ದೋಷಗಳಿವೆ ಎಂದು ನಮಗೆ ತಿಳಿಸಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗುಡುಗು ಸಿಡಿಲಿನಿಂದ ಈ ಸೇತುವೆಯ ಒಂದು ಭಾಗ ಕುಸಿದಿತ್ತು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಆಗಿನ ವಿರೋಧ ಪಕ್ಷದ ನಾಯಕನಾಗಿ ನಾನು ಈ ವಿಷಯವನ್ನು ಎತ್ತಿದ್ದೆ. ಅಧಿಕಾರಕ್ಕೆ ಬಂದ ನಂತರ, ನಾವು ತನಿಖೆಗೆ ಆದೇಶಿಸಿದ್ದೇವೆ. ತಜ್ಞರ ಅಭಿಪ್ರಾಯವನ್ನು ಕೇಳಿದ್ದೇವೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: Bihar: ಗಂಗಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆ 2ನೇ ಸಲ ಕುಸಿತ

ನಾಲ್ಕು ಪಥಗಳ ಸುಲ್ತಂಗಂಜ್-ಅಗುವಾನಿ ಘಾಟ್ ಸೇತುವೆಯ ಮೂರು ಪಿಲ್ಲರ್‌ಗಳ ಮೇಲೆ ಹಾಕಲಾದ ಕನಿಷ್ಠ 30 ಚಪ್ಪಡಿಗಳು ಭಾನುವಾರ ನದಿಗೆ ಬಿದ್ದವು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಸೇತುವೆಗೆ ಅಂದಾಜು ₹ 1,700 ಕೋಟಿ ವೆಚ್ಚವಾಗಿದೆ ಎಂದು ಹೇಳಲಾಗಿದೆ.

ಹರ್ಯಾಣ ಮೂಲದ ಕಂಪನಿಯೊಂದು ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದ್ದು, ಇದರ ವಿರುದ್ಧ ಬಿಜೆಪಿ ಈಗ ಕ್ರಮಕ್ಕೆ ಮುಂದಾಗಿದೆ. ಈ ಸೇತುವೆಯು ಉತ್ತರ ಬಿಹಾರವನ್ನು ಅದರ ದಕ್ಷಿಣದೊಂದಿಗೆ ಸಂಪರ್ಕಿಸಲು ಗಂಗಾ ನದಿ ಮೇಲೆ ನಿರ್ಮಿಸಲಾಗಿದ್ದು ಇದು ಸುಲ್ತಾನಾಗ್ಂಜ್, ಖಗರಿಯಾ, ಸಹರ್ಸಾ, ಮಾಧೆಪುರ ಮತ್ತು ಸುಪೌಲ್‌ಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ