ನಮ್ಮ ಹೋರಾಟಕ್ಕೆ ಉದ್ಯೋಗ ಅಡ್ಡಿಯಾಗುವುದಾದರೆ ಅದನ್ನು ಬಿಡುವುದಕ್ಕೂ ನಾವು ಹಿಂಜರಿಯುವುದಿಲ್ಲ: ಕುಸ್ತಿಪಟುಗಳು
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಮನವಿ ಮಾಡಲು ಕುಸ್ತಿಪಟುಗಳು ಶನಿವಾರ ಸಂಜೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.
ದೆಹಲಿ: ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ನ್ಯಾಯಕ್ಕಾಗಿ ಮಾಡುತ್ತಿರುವ ಈ ಹೋರಾಟಕ್ಕೆ ಕೆಲಸ ಅಡ್ಡಿಯಾದರೆ ಆ ಕೆಲಸವನ್ನೂ ತೊರೆಯಲು ನಾವು ಹಿಂಜರಿಯುವುದಿಲ್ಲ ಎಂದು ಕುಸ್ತಿಪಟುಗಳಾದ ಬಜರಂಗ್ ಪುನಿಯಾ(Bajrang Punia) ಮತ್ತು ವಿನೇಶ್ ಫೋಗಟ್ (Vinesh Phogat) ಹೇಳಿದ್ದಾರೆ. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಸಾಕ್ಷಿ ಮಲಿಕ್ (Sakshee Malikkh), ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ರೈಲ್ವೆಯಲ್ಲಿ ತಮ್ಮ ಕರ್ತವ್ಯವನ್ನು ಪುನಾರಂಭಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ಸಂಪೂರ್ಣ ತಪ್ಪು. ನ್ಯಾಯಕ್ಕಾಗಿ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ, ನಾವೂ ಹಿಂದೆ ಸರಿಯುವುದಿಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿನ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿ ಹಬ್ಬಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಪದಕಗಳ ಬೆಲೆ ₹ 15 ಎಂದವರು ಈಗ ನಮ್ಮ ಉದ್ಯೋಗದ ಹಿಂದೆ ಬಿದ್ದಿದ್ದಾರೆ. ನಮ್ಮ ಬದುಕು ಅಪಾಯದಲ್ಲಿದೆ.ಅದರ ಮುಂದೆ ಈ ಉದ್ಯೋಗ ಬಹಳ ಸಣ್ಣ ವಿಷಯ. ಉದ್ಯೋಗವು ನ್ಯಾಯದ ಹಾದಿಯಲ್ಲಿ ಅಡ್ಡಿಯಾಗುವಂತೆ ಕಂಡರೆ ನಾವು ಅದನ್ನು ತೊರೆಯಲು 10 ಸೆಕೆಂಡುಗಳನ್ನು ಕೂಡಾ ತೆಗೆದುಕೊಳ್ಳುವುದಿಲ್ಲ, ಕೆಲಸದ ಭಯವನ್ನು ತೋರಿಸಬೇಡಿ ಎಂದು ವಿನೇಶ್ ಫೋಗಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
हमारे मेडलों को 15-15 रुपए के बताने वाले अब हमारी नौकरी के पीछे पड़ गये हैं.
हमारी ज़िंदगी दांव पर लगी हुई है, उसके आगे नौकरी तो बहुत छोटी चीज़ है.
अगर नौकरी इंसाफ़ के रास्ते में बाधा बनती दिखी तो उसको त्यागने में हम दस सेकेंड का वक्त भी नहीं लगाएँगे. नौकरी का डर मत दिखाइए.
— Vinesh Phogat (@Phogat_Vinesh) June 5, 2023
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಮನವಿ ಮಾಡಲು ಕುಸ್ತಿಪಟುಗಳು ಶನಿವಾರ ಸಂಜೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಅಮಿತ್ ಶಾ ಕುಸ್ತಿಪಟುಗಳಿಗೆ ಭರವಸೆ ನೀಡಿದರು. “ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿ” ಎಂದು ಅವರು ಕುಸ್ತಿಪಟುಗಳಿಗೆ ಹೇಳಿದ್ದಾರೆ.
ಸಾಕ್ಷಿ ಮಲಿಕ್ ಅವರು ಇಂದು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.ನಮಗೆ ಒಂದೇ ಒಂದು ಬೇಡಿಕೆ ಇದೆ – ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಬೇಕು. ನಮಗೆ ನ್ಯಾಯ ಸಿಗುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Sakshi Malik: ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ಎಲ್ಲವೂ ಸುಳ್ಳು ಸುದ್ದಿ ಎಂದ ಸಾಕ್ಷಿ ಮಲಿಕ್
ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಐದು ದಿನಗಳ ಗಡುವು ಶನಿವಾರ ಕೊನೆಗೊಂಡ ನಂತರ ಪ್ರತಿಭಟನಾ ನಿರತ ಕುಸ್ತಿಪಟುಗಳು ಅಮಿತ್ ಶಾ ಅವರನ್ನು ಭೇಟಿಯಾಗಲು ಕೋರಿದ್ದರು ಎಂದು ಮೂಲಗಳು ಹೇಳುತ್ತವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Mon, 5 June 23