ರಾಜಕಾರಣಿಗಳೆಂದೆರೇ ಶ್ರೀಮಂತರು. ಅವರ ಮಕ್ಕಳು ಮತ್ತೂ ಶ್ರೀಮಂತರು..! ಈ ಮಾತು ಅನ್ವಯ ಆಗುವುದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪುತ್ರನಿಗೆ. ಬಿಹಾರ ಸಿಎಂ ನಿತೀಶ್ ಕುಮಾರ್ಗಿಂತ ಅವರ ಪುತ್ರ 5 ಪಟ್ಟು ಹೆಚ್ಚು ಶ್ರೀಮಂತರಂತೆ. ನಿತೀಶ್ ಕುಮಾರ್ ಬಳಿ ಒಟ್ಟಾರೆ (ಚಿರಾಸ್ತಿ, ಸ್ಥಿರಾಸ್ಥಿ ಎಲ್ಲ ಸೇರಿ ) 75.36 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯಿದ್ದರೆ, ಅವರ ಪುತ್ರ ನಿಶಾಂತ್ ಬಳಿ, ಈ ಮೊತ್ತದ 5 ಪಟ್ಟು ಜಾಸ್ತಿ ಆಸ್ತಿಯಿದೆ. ಬಿಹಾರ ಸರ್ಕಾರಿ ವೆಬ್ಸೈಟ್ನಲ್ಲಿ ಡಿ.31ರಂದು ಉಲ್ಲೇಖವಾದ ಆಸ್ತಿ ವಿವರದ ಅನ್ವಯ, ನಿತೀಶ್ ಕುಮಾರ್ ಬಳಿ, 29,385 ರೂಪಾಯಿ ನಗದು ಇದೆ. ಹಾಗೇ, ಬ್ಯಾಂಕ್ ಅಕೌಂಟ್ನಲ್ಲಿ 42,763 ರೂಪಾಯಿ ಇದೆ. ಆದರೆ ಅವರ ಪುತ್ರನ ಬಳಿ ಕೈಯಲ್ಲಿ 16, 549 ರೂಪಾಯಿ ಇದ್ದು, ಬ್ಯಾಂಕ್ನಲ್ಲಿ 1.28 ಕೋಟಿ ರೂಪಾಯಿ ಎಫ್ಡಿ ಇದೆ.
ನಿತೀಶ್ ಕುಮಾರ್ ಬಳಿ 16.51 ಲಕ್ಷ ರೂಪಾಯಿ ಚರಾಸ್ತಿ ಇದ್ದು, 58.85 ಲಕ್ಷ ರೂ.ಮೌಲ್ಯ ಸ್ಥಿರಾಸ್ತಿ ಇದೆ. ಆದರೆ ಅವರ ಪುತ್ರ ಕೋಟಿ ರೂಪಾಯಿಯಲ್ಲಿ ಸಂಪಾದಿಸಿದ್ದಾರೆ. ಪುತ್ರ ನಿಶಾಂತ್ ಚರಾಸ್ತಿ ಮೌಲ್ಯ 1.63 ಕೋಟಿ ರೂಪಾಯಿ ಹಾಗೂ ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂಪಾಯಿ. ಸಿಎಂ ನಿತೀಶ್ ಕುಮಾರ್ ಅವರು ದೆಹಲಿಯ ದ್ವಾರಕಾದ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಮುಖ್ಯಮಂತ್ರಿಯವರು ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. ಹಾಗೇ, ಇವರ ಪುತ್ರ ನಿಶಾಂತ್ ಕಲ್ಯಾಣ್ ಬಿಘಾ ಮತ್ತು ಹಕೀಕತ್ಪುರದಲ್ಲಿ ಕೃಷಿ ಭೂಮಿ ಮತ್ತು ವಸತಿ ಗೃಹಗಳನ್ನು ಹೊಂದಿದ್ದಾರೆ. ಕಂಕರ್ಬಾಗ್ನಲ್ಲೂ ಕೂಡ ಇವರ ಆಸ್ತಿ ಇದೆ. ಕಲ್ಯಾಣ್ ಬಿಘಾ ನಿತೀಶ್ ಕುಮಾರ್ ಅವರ ಪೂರ್ವಜರು ವಾಸವಾಗಿದ್ದ ಹಳ್ಳಿ. ಇಲ್ಲಿ ನಿಶಾಂತ್, ಕೃಷಿ ಭೂಮಿ ಮತ್ತು ಕೃಷಿ ಯೋಗ್ಯವಲ್ಲದ ಭೂಮಿಗಳನ್ನು ಹೊಂದಿದ್ದಾರೆ. ಇನ್ನು ನಿತೀಶ್ ಕುಮಾರ್ ಅವರು 1.45 ಲಕ್ಷ ರೂಪಾಯಿ ಮೌಲ್ಯದ 13 ಹಸುಗಳು ಮತ್ತು 9 ಕರುಗಳನ್ನು ಹೊಂದಿದ್ದಾಗಿ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿವರ್ಷ ಕೊನೇ ದಿನ ಸರ್ಕಾರದ ಸಂಪುಟದ ಎಲ್ಲ ಸಚಿವರೂ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಅದು ಸರ್ಕಾರಿ ವೆಬ್ಸೈಟ್ನಲ್ಲಿ ಉಲ್ಲೇಖವಾಗಬೇಕು ಎಂದು ಈ ಹಿಂದೆಯೇ ನಿತೀಶ್ ಕುಮಾರ್ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ನಮೂದಿಸಲೇಬೇಕಾಗುತ್ತದೆ. ಇನ್ನೂ ಒಂದು ಮುಖ್ಯವಾದ ವಿಷಯವೆಂದರೆ, ನಿತೀಶ್ ಕುಮಾರ್ ಅವರು ತಮ್ಮ ಸಂಪುಟದ ಎಲ್ಲ ಸಹೋದ್ಯೋಗಿಗಳಿಗಿಂತಲೂ ಬಡವರೇ ಆಗಿದ್ದಾರೆ.
ಇದನ್ನೂ ಓದಿ: ಹೋಮ-ಹವನ ವಿಶೇಷ ಪೂಜೆ ಮೂಲಕ ತಮ್ಮ ನೆಚ್ಚಿನ ಕೋತಿ ಚಿಂಟು 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿದ ಸಾ.ರಾ.ಮಹೇಶ್