ಹೋಮ-ಹವನ ವಿಶೇಷ ಪೂಜೆ ಮೂಲಕ ತಮ್ಮ ನೆಚ್ಚಿನ ಕೋತಿ ಚಿಂಟು 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿದ ಸಾ.ರಾ.ಮಹೇಶ್
ಎರಡು ವರ್ಷದ ಹಿಂದೆ ಸಾ.ರಾ.ಮಹೇಶ್ ಅವರ ಸಾಕು ಕೋತಿ ಚಿಂಟು ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿತ್ತು. ಘಟನೆ ವೇಳೆ ಸಾ.ರಾ.ಮಹೇಶ್ ದುಬೈ ಪ್ರವಾಸ ಕೈಗೊಂಡಿದ್ದು ವಿಷಯ ತಿಳಿಯುತ್ತಿದ್ದಂತೆ ಅರ್ಧಕ್ಕೆ ಮೊಟಕುಗೊಳಿಸಿ ವಾಪಾಸ್ ಆಗಿದ್ದರು.
ಮೈಸೂರು:ಇತ್ತೀಚೆಗೆ ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಿವೆ. ಮಾನವೀಯತೆ ಮರಿಚಿಕೆಯಾಗುತ್ತಿದೆ. ಬದುಕಿದವರನ್ನೇ ಜನ ನೆನಪು ಮಾಡಿಕೊಳ್ಳುವುದಿಲ್ಲ. ಅಂತದರಲ್ಲಿ ಇಲ್ಲೊಬ್ಬ ಶಾಸಕರು ತಮ್ಮ ಸಾಕು ಕೋತಿಗೆ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ಎರಡನೇ ವರ್ಷದ ತಿಥಿ ಮಾಡಿದ್ದಾರೆ. ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಅಗಲಿದ ತಮ್ಮ ಅಚ್ಚು ಮೆಚ್ಚಿನ ಕೋತಿಯ 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಮಾಡಿಸಿ ಸ್ನೇಹಿತರು, ಬಂಧುಗಳಿಗೆ ಊಟ ಹಾಕಿಸಿದ್ದಾರೆ.
ಮೈಸೂರಿನ ದಟ್ಟಗಳ್ಳಿಯ ತೋಟದಲ್ಲಿ ಕೆ.ಆರ್ ನಗರ ಶಾಸಕ ಸಾ.ರಾ. ಮಹೇಶ್ ತಮ್ಮ ಸಾಕು ಕೋತಿ ಚಿಂಟುವಿನ ಎರಡನೇ ವರ್ಷದ ತಿಥಿ ಮಾಡಿದ್ದಾರೆ. ವೇದ ಮಂತ್ರಗಳ ಘೋಷ, ತಳಿರು ತೋರಣಗಳ ಅಲಂಕಾರ ಹೂವಿನ ಚಿತ್ತಾರದ ನಡುವೆ ಹೋಮ ಹವನ ಮಾಡಿ ಸಾಂಪ್ರದಾಯಿಕವಾಗಿ ತಿಥಿ ಕಾರ್ಯ ಮಾಡಿದ್ದಾರೆ.
ಈ ಕೋತಿ ಸಾ.ರಾ ಮಹೇಶ್ ಅವರಿಗೆ ಸಿಕ್ಕಿದ್ದೇ ಆಕಸ್ಮಿಕ ಕೆಲ ವರ್ಷಗಳ ಹಿಂದೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾ.ರಾ. ಮಹೇಶ್ ಅವರ ಜಮೀನಿಗೆ ಕೋತಿಗಳ ಹಿಂಡು ಬಂದಿತ್ತು. ಅದರಲ್ಲಿ ಒಂದು ಮರಿ ಕೋತಿ ಸಹಾ ಇತ್ತು. ಕೋತಿಗಳ ಗುಂಪು ಹೋದ ಮೇಲೆ ಈ ಮರಿ ಕೋತಿ ತೋಟದಲ್ಲೇ ಉಳಿದುಕೊಂಡು ಬಿಟ್ಟಿತ್ತು. ಅದನ್ನು ಸಾ.ರಾ. ಮಹೇಶ್ ಅವರೇ ಸಾಕಿ ಚಿಂಟು ಅಂತಾ ಹೆಸರಿಟ್ಟಿದ್ದರು.
ಚಿಂಟುಗೆ ಸಾ.ರಾ. ಮಹೇಶ್ ಅಂದ್ರೆ ಎಲ್ಲಿಲ್ಲದ ಅಕ್ಕರೆ. ಸಾ.ರಾ. ಮಹೇಶ್ ಜಮೀನಿಗೆ ಹೋಗೋದೆ ತಡ ಅವರ ಬಳಿ ಬಂದು ಬಿಡುತಿತ್ತು. ಅವರ ಜೊತೆ ವಾಕಿಂಗ್ ಬೈಕ್ ಸವಾರಿ ಅವರ ಹೆಗಲ ಮೇಲೆ ಕೂರೋದು ಮಾಡ್ತಾ ಇತ್ತು.
ಎರಡು ವರ್ಷಗಳ ಹಿಂದೆ ಚಿಂಟು ಜಮೀನಿನಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಚಿಂಟು ಕೋತಿ ಸಾವನ್ನಪ್ಪಿತ್ತು. ಆಗ ಶಾಸಕ ಸಾ.ರಾ. ಮಹೇಶ್ ದುಬೈ ಪ್ರವಾಸದಲ್ಲಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಪ್ರವಾಸ ಮೊಟಕುಗೊಳಿಸಿ ಮೈಸೂರಿಗೆ ಆಗಮಿಸಿ ತಮ್ಮ ಜಮೀನಿನಲ್ಲೇ ಚಿಂಟು ಕೋತಿ ಅಂತ್ಯಕ್ರಿಯೆ ನಡೆಸಿದ್ರು. ಅಷ್ಟೇ ಅಲ್ಲ ಅಲ್ಲೇ ಚಿಂಟುಗಾಗಿ ಗುಡಿಯನ್ನು ಕಟ್ಟಿಸಿದ್ದಾರೆ. ಇದೀಗ ಚಿಂಟು ಅಗಲಿ ಎರಡು ವರ್ಷವಾದ ಕಾರಣ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅದ್ದೂರಿಯಾಗಿ ಮಾಡಿದ್ರು.
ಸಾ.ರಾ. ಮಹೇಶ್ ಜಮೀನಿನಲ್ಲಿರುವ ಚಿಂಟು ಕೋತಿ ದೇಗುಲದ ಬಳಿ ಹೋಮ ನಡೆಸಲಾಯ್ತು. ಗಣ ಹೋಮ, ಶಾಂತಿ ಹೋಮ ಸೇರಿ ಹಲವು ಹೋಮಗಳ ನಡೆದವು. ಎಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿಸಲಾಯ್ತು. ಮನುಷ್ಯರಿಗೆ ಮಾಡುವಂತೆ ಎಲ್ಲಾ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯ್ತು. ಇದಕ್ಕಾಗಿ ಸಾ.ರಾ. ಮಹೇಶ್ ತೋಟ ಸಂಪೂರ್ಣವಾಗಿ ಅಲಂಕೃತಗೊಂಡಿತ್ತು. ಅಷ್ಟೇ ಅಲ್ಲ ಎರಡನೇ ವರ್ಷದ ತಿಥಿಗಾಗಿ ಸಾವಿರಾರು ಜನರಿಗೆ ಅನ್ನದಾನ ಸಹಾ ಮಾಡಲಾಯ್ತು.
ಮನುಷ್ಯರು ಮನಷ್ಯರನ್ನೇ ಮರೆಯುವ, ಮನೆಯವರೇ ಅಗಲಿದವರ ಕಾರ್ಯ ಮಾಡದ ಈ ಕಾಲದಲ್ಲಿ ಸಾ.ರಾ. ಮಹೇಶ್ ಕೋತಿಗಾಗಿ ಮಾಡುತ್ತಿರುವ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗಿವೆ. ಸಾ.ರಾ. ಮಹೇಶ್ ಅವರ ಪ್ರಾಣಿ ಪ್ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.
ವರದಿ: ರಾಮ್, ಟಿವಿ9 ಮೈಸೂರು
ಇದನ್ನೂ ಓದಿ: ನೆಚ್ಚಿನ ವಾನರನ ಸಾವಿನಿಂದ ಪರಿತಪಿಸುತ್ತಿದ್ದ ಸಾರಾ, ಚಿಂಟು ಮಂದಿರ ನಿರ್ಮಿಸಿಯೇ ಬಿಟ್ಟರು!
Published On - 10:09 am, Sun, 2 January 22