Bilkis Bano Case: ಅತ್ಯಾಚಾರವೆಸಗಿದ 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ ಬಿಲ್ಕಿಸ್ ಬಾನೋ

| Updated By: ಸುಷ್ಮಾ ಚಕ್ರೆ

Updated on: Nov 30, 2022 | 3:32 PM

ಗುಜರಾತ್ ಸರ್ಕಾರವು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿತ್ತು.

Bilkis Bano Case: ಅತ್ಯಾಚಾರವೆಸಗಿದ 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ ಬಿಲ್ಕಿಸ್ ಬಾನೋ
ಬಿಲ್ಕಿಸ್ ಬಾನೋ
Follow us on

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡದ (Gujarat Riots) ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣದ 11 ಮಂದಿ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ (Bilkis Bano) ಇಂದು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಒಪ್ಪಿಗೆ ಸೂಚಿಸಿದೆ. ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud) ನೇತೃತ್ವದ ನ್ಯಾಯಪೀಠದ ಮುಂದೆ ಬಿಲ್ಕಿಸ್ ಬಾನೋ ಪರ ವಕೀಲೆ ಶೋಭಾ ಗುಪ್ತಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಈಗ ಸಂವಿಧಾನ ಪೀಠದ ಭಾಗವಾಗಿರುವುದರಿಂದ ಈ ವಿಷಯವನ್ನು ಆಲಿಸುವ ಸಾಧ್ಯತೆಗಳು ಕಡಿಮೆ ಎಂದು ಗುಪ್ತಾ ವಾದಿಸಿದ್ದಾರೆ.

ಗುಜರಾತ್ ಸರ್ಕಾರವು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಇದಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಂದಿದ್ದಕ್ಕಾಗಿ 11 ಮಂದಿಗೆ ಜೀವಾವಧಿ ಶಿಕ್ಷೆ ಆರಂಭದಲ್ಲಿ ವಿಧಿಸಲಾಗಿತ್ತು. ಅತ್ಯಾಚಾರದ ಅಪರಾಧಿಗಳಲ್ಲಿ ಒಬ್ಬನ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರವು 1992ರ ಪರಿಹಾರ ನೀತಿಯ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡಲು ಪರಿಗಣಿಸಬಹುದು ಎಂದು ಹೇಳಿತ್ತು.

ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣ; ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮತಿ

ಆ ತೀರ್ಪಿನ ಆಧಾರದ ಮೇಲೆ ಗುಜರಾತ್ ಸರ್ಕಾರ ಎಲ್ಲಾ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ 2002ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ವಿನಾಯತಿ ಮತ್ತು ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಪರಾಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಬೇಕಿತ್ತೇ ಹೊರತು ಗುಜರಾತ್ ಸರ್ಕಾರವಲ್ಲ ಎಂದು ಬಿಲ್ಕಿಸ್ ಬಾನೋ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಏನಿದು ಘಟನೆ?:
2002ರ ಗುಜರಾತ್ ಕೋಮು ಗಲಭೆಯ ವೇಳೆ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಕುಟುಂಬದ 7 ಮಂದಿಯನ್ನು ಕೊಲೆ ಮಾಡಲಾಗಿತ್ತು. ಆಗ ಅವರಿಗೆ ಕೇವಲ 21 ವರ್ಷವಾಗಿತ್ತು. ಈ ಅವಧಿಯಲ್ಲಿ ಬಿಲ್ಕಿಸ್ ಬಾನೋ 5 ತಿಂಗಳ ಗರ್ಭಿಣಿಯಾಗಿದ್ದರು. ಅವರ 3 ವರ್ಷದ ಮಗಳನ್ನೂ ಕೊಲ್ಲಲಾಗಿತ್ತು. ಅತ್ಯಾಚಾರದ ನಂತರದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಗೆ ಎಚ್ಚರಗೊಂಡ ನಂತರದಲ್ಲಿ ಬಿಲ್ಕಿಸ್ ಬುಡಕಟ್ಟು ಮಹಿಳೆಯಿಂದ ಬಟ್ಟೆಯನ್ನು ಪಡೆದುಕೊಂಡರು. ನಂತರ ದಾಹೋದ್ ಜಿಲ್ಲೆಯ ಲಿಮ್ಖೇಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆದರೆ ಅಂದು ಅಲ್ಲಿನ ಹೆಡ್ ಕಾನ್‌ಸ್ಟೆಬಲ್ ಸತ್ಯವನ್ನು ಮುಚ್ಚಿಟ್ಟು ದೂರನ್ನು ಮೊಟಕುಗೊಳಿಸಿದ್ದರು. ನಂತರ ಈ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬಳಿಕ ಹೆಚ್ಚು ಮಹತ್ವ ಪಡೆದುಕೊಂಡಿತ್ತು.

ಇದನ್ನೂ ಓದಿ: Bilkis Bano case ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಎನ್​​ಜಿಒ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ಮುಂಬೈನ ಸಿಬಿಐ ಕೋರ್ಟ್​ ಜನವರಿ 21, 2008ರಂದು ಈ ಪ್ರಕರಣಕ್ಕೆ ಸಂಬಂಧಿಸಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಬಾಂಬೆ ಹೈಕೋರ್ಟ್​ ಈ ತೀರ್ಪನ್ನು ಎತ್ತಿಹಿಡಿದಿತ್ತು. 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಜನರು 14 ವರ್ಷಗಳಿಂದ ಜೈಲಿನಲ್ಲಿದ್ದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರ ನಡವಳಿಕೆ ಉತ್ತಮವಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ 3 ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವರದಿ ಸಲ್ಲಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ