ದೆಹಲಿ: ಬಿಲ್ಕಿಸ್ ಬಾನು (Bilkis Bano) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ (Supreme Court) ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆಗೊಳಪಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಮಂಗಳವಾರ ಹೇಳಿದ್ದಾರೆ. ಪ್ರಕರಣದ ಅಪರಾಧಿಗಳಿಗೆ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಮಾಡಿ ದ್ದನ್ನು ಪ್ರಶ್ನಿಸಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್ ಈ ಅರ್ಜಿ ಸಲ್ಲಿಸಿದ್ದಾರೆ. ನಾವು ಕ್ಷಮಾಪಣೆ ನೀಡಿದ್ದನ್ನು ಪ್ರಶ್ನಿಸುತ್ತಿದ್ದೇವೆಯೇ ಹೊರತು ಸುಪ್ರೀಂಕೋರ್ಟ್ ಆದೇಶವನ್ನಲ್ಲ. ಸುಪ್ರೀಂಕೋರ್ಟ್ ಆದೇಶ ಸರಿಯಾಗಿದೆ, ಮೈ ಲಾರ್ಡ್ಸ್. ಯಾವ ತತ್ವಗಳ ಆಧಾರದ ಮೇಲೆ ಕ್ಷಮಾಪಣೆ ನೀಡಲಾಗಿದೆ ಎಂಬುದನ್ನು ನಾವು ಪ್ರಶ್ನಿಸುತ್ತಿದ್ದೇವೆಎಂದು ಸಿಬಲ್ ಹೇಳಿದರು. ವಕೀಲರು ಸಿಪಿಐ(ಎಂ) ನಾಯಕಿ ಸುಭಾಸಿನಿ ಅಲಿ, ಫ್ರೀಲ್ಯಾನ್ಸ್ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ರೇವತಿ ಲಾಲ್ ಮತ್ತು ಮಾಜಿ ತತ್ವಶಾಸ್ತ್ರ ಪ್ರೊಫೆಸರ್ ಮತ್ತು ಕಾರ್ಯಕರ್ತ ರೂಪ್ ರೇಖ್ ವರ್ಮಾ ಅವರನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ರೀತಿಯ ಬೇಡಿಕೆಯೊಡ್ಡಿ ಟಿಎಂಎಸಿ ಸಂಸದೆ ಮಹುವಾ ಮೊಯಿತ್ರಾ ಕೂಡಾ ಅರ್ಜಿ ಸಲ್ಲಿಸಿದ್ದಾರೆ. . ಮೊಯಿತ್ರಾ ಅವರು ಗುಜರಾತ್ ಸರ್ಕಾರವು ಎಲ್ಲಾ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಸುಪ್ರೀಂಕೋರ್ಟ್ ಈ ಹಿಂದೆ ಗುಜರಾತ್ ಸರ್ಕಾರಕ್ಕೆ ಕ್ಷಮಾಪಣೆ ಅರ್ಜಿಯನ್ನು ಪರಿಗಣಿಸುವಂತೆ ಸೂಚಿಸಿತ್ತು.
ಜನವರಿ 21, 2008 ರಂದು ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಏಳು ಸದಸ್ಯರ ಹತ್ಯೆಯ ಆರೋಪದ ಮೇಲೆ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿಯಿತು.
ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ ಬಿಲ್ಕಿಸ್ ಬಾನುಗೆ 21 ವರ್ಷ, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಹತ್ಯೆಯಾದವರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಾಳೆ.
ಗುಜರಾತ್ ಸರ್ಕಾರವು ತನ್ನ ಕ್ಷಮಾಪಣೆ ನೀತಿಯಡಿಯಲ್ಲಿ ಅವರನ್ನು ಬಿಡುಗಡೆ ಮಾಡಲು ಅನುಮತಿಸಿದ ನಂತರ 11 ಅಪರಾಧಿಗಳು ಆಗಸ್ಟ್ 15 ರಂದು ಗೋಧ್ರಾ ಸಬ್ಜೈ ಲಿನಿಂದ ಹೊರನಡೆದರು. ಅವರು 15 ವರ್ಷಗಳಿಗೂ ಹೆಚ್ಚು ಜೈಲು ವಾಸವನ್ನು ಪೂರ್ಣಗೊಳಿಸಿದ್ದರು.