ನವದೆಹಲಿ: ಕೋಮುವಾದ, ಲವ್ ಜಿಹಾದ್ ಭೀತಿ ಮತ್ತು ದ್ವೇಷದ ರಾಜಕಾರಣ ಮಾತ್ರ ಬಿಜೆಪಿಯಲ್ಲಿರುವುದು. ಇದು ಯಾವುದೂ ಕೇರಳದಲ್ಲಿ ನಡೆಯುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ. ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತರೂರ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ 88 ವರ್ಷದ ಇ. ಶ್ರೀಧರನ್ ಅವರಿಗೆ ಕೇರಳದ ರಾಜಕೀಯ ಭವಿಷ್ಯ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ತರೂರ್, ನಮ್ಮ ಪಕ್ಷದಲ್ಲಿ ಸಮರ್ಥ ಹಾಗೂ ಅನುಭವಿ ನಾಯಕರಿದ್ದಾರೆ. ಯಾರು ಬೇಕಾದರೂ ಮುಖ್ಯಮಂತ್ರಿ ಸ್ಥಾನವಹಿಸಬಹುದು ಎಂದು ಹೇಳಿದ್ದಾರೆ.
ಬಿಜೆಪಿಯ ಪ್ರಮುಖ ಅಭ್ಯರ್ಥಿ ಆಗಿದ್ದಾರೆ ಮೆಟ್ರೊಮ್ಯಾನ್ ಇ. ಶ್ರೀಧರನ್. ಇದು ಚುನಾವಣೆ ಮೇಲೆ ಪ್ರಭಾವ ಬೀರಲಿದೆಯೇ ಎಂದು ಕೇಳಿದಾಗ ಬಿಜೆಪಿಗೆ ಕೋಮುವಾದ, ಲವ್ ಜಿಹಾದ್ ಹೆಸರಲ್ಲಿ ಭೀತಿ ಹುಟ್ಟಿಸುವುದು, ದ್ವೇಷ ರಾಜಕಾರಣ ಅಷ್ಟೇ ಗೊತ್ತು. ಅದು ಕೇರಳದಲ್ಲಿ ನಡೆಯುವುದಿಲ್ಲ ಎಂದಿದ್ದಾರೆ. ಬಿಜೆಪಿ ಕೇರಳದ ಚುನಾವಣಾ ಕಣಕ್ಕಿಳಿದಿದೆ. ಇ. ಶ್ರೀಧರನ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಬಿಜೆಪಿ ಪ್ರಭಾವ ಬೀರಲು ಪ್ರಯತ್ನಿಸಿದೆ. ಆದರೆ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ 88ರ ಹರೆಯದ ಟೆಕಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ತರೂರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಎಡಪಕ್ಷದ ಜತೆಗಿದೆ. ಆದರೆ ಕೇರಳದಲ್ಲಿ ಕಾಂಗ್ರೆಸ್, ಎಡಪಕ್ಷದ ವಿರುದ್ಧ ಹೋರಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ದ್ವಂದ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಟೀಕಿಸುತ್ತಿದೆ. ಈ ಬಗ್ಗೆ ನೀವೇನಂತೀರಿ ಎಂದು ಕೇಳಿದಾಗ ಭಾರತದಂತ ವಿಶಾಲವಾದ ದೇಶದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ರಾಜಕೀಯ ವೈಶಿಷ್ಟ್ಯವಿರುತ್ತದೆ .
ಎಲ್ಡಿಎಫ್ ಮತ್ತು ಯುಡಿಎಫ್ ನಡುವಿನ ಜಿದ್ದಾಜಿದ್ದಿನ ಪೈಪೋಟಿ ಇಲ್ಲಿ ಆಳವಾಗ ಬೇರೂರಿದೆ. ಆದರೆ ದೇಶದಲ್ಲಿನ ಜಾತ್ಯಾತೀತತೆ, ಬಿಜೆಪಿಯ ಜನದ್ರೋಹಿ ನೀತಿ ಮೊದಲಾದ ರಾಷ್ಟ್ರೀಯ ಸಮಸ್ಯೆಗಳು ಬಂದಾಗ ಎರಡೂ ಪಕ್ಷಗಳು ಸಮಾನ ನಿಲುವು ತೋರುತ್ತದೆ ಎಂದಿದ್ದಾರೆ.
2014ರಿಂದ ನನ್ನ ವಿರುದ್ಧ ಕೇರಳದಲ್ಲಿ ಪ್ರಚಾರ ಮಾಡಿದ ಸಿಪಿಎಂ ಸಂಸದರು ಲೋಕಸಭೆಯಲ್ಲಿ ನನ್ನ ನಿಲುವುಗಳನ್ನು ಬೆಂಬಲಿಸಿದ್ದಾರೆ. ಬಂಗಾಳದ ಬಗ್ಗೆ ನೀವು ಅಲ್ಲಿನ ಸ್ಥಳೀಯ ರಾಜಕೀಯ ನಾಯಕರಲ್ಲಿ ಕೇಳಿನೋಡಿ ಎಂದು ತರೂರ್ ಉತ್ತರಿಸಿದ್ದಾರೆ. ಬಿಜೆಪಿಯ ಆರೋಪ ಅಚ್ಚರಿಯುಂಟು ಮಾಡುವುದಿಲ್ಲ. ಯಾಕೆಂದರೆ ಅವರು ದೇಶದ ವಿವಿಧತೆಯನ್ನು ಅರ್ಥ ಮಾಡಿಕೊಳ್ಳುವುದೂ ಇಲ್ಲ ಶ್ಲಾಘಿಸುವುದೂ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಪಶ್ಚಿಮ ಬಂಗಾಳದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ , ಅಸ್ಸಾಂನಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಜತೆಗೆ ಮೈತ್ರಿ ಮಾಡಿಕೊಂಡಿರುವುದನ್ನು ಅಮಿತ್ ಶಾ ಪ್ರಶ್ನಿಸಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಪ್ರತಿಯೊಂದು ರಾಜ್ಯದಲ್ಲಿರುವ ಪ್ರತಿಯೊಂದು ಪಕ್ಷಕ್ಕೂ ಅದರದ್ದೇ ಆದ ಇತಿಹಾಸ, ಸಂಪ್ರದಾಯ ಮತ್ತು ರಾಜಕೀಯ ಬೇಡಿಕೆ ಇರುತ್ತದೆ. ಈ ಮೂರು ಪಕ್ಷಗಳಲ್ಲಿ ಅಲ್ಪ ಸ್ವಲ್ಪ ಸಾಮ್ಯತೆ ಇದೆ. ಅವರೆಲ್ಲರೂ ಮುಸ್ಲಿಂ ಪಕ್ಷಗಳು. ಬಿಜೆಪಿ ಪಕ್ಷವು ಕೋಮುವಾದದಿಂದಲೇ ಎಲ್ಲವನ್ನೂ ನೋಡುತ್ತದೆ. ಅದನ್ನು ಕಾಂಗ್ರೆಸ್ ಮೇಲೆ ಹೊರೆಸುವುದು ಪಾಪದ ಕೆಲಸ ಎಂದಿದ್ದಾರೆ ತರೂರ್.
ಕೇರಳದ ಬಗ್ಗೆ ಹೇಳುವುದಾದರೆ ಸಮುದಾಯ ಸಂಘಟನೆಗಳಾದ ಎನ್ಎಸ್ಎಸ್ (ನಾಯರ್ ಸರ್ವೀಸ್ ಸೊಸೈಟಿ) ಅಥವಾ ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ ( SNDP) ಒಂದು ಕಡೆ, ಇನ್ನೊಂದಡ ಸಮುದಾಯ ಆಧಾರಿತ ಪಕ್ಷಗಳಾದ ಐಯುಎಂಲ್. ಇನ್ನೊಂದೆಡೆ ಕೋಮುವಾದಿ ಪಕ್ಷಗಳಾದ ಬಿಜೆಪಿ ಅಥವಾ ಸೋಷ್ಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)- ಇವುಗಳಿಗೆ ಧಾರ್ಮಿಕ ಸಂಘಟನೆಯ ದೃಷ್ಟಿಕೋನ ಹೊರತಾಗಿ ಬೇರೆ ಯಾವುದೂ ಕಾಣುವುದಿಲ್ಲ ಎಂದು ತರೂರ್ ಆರೋಪಿಸಿದ್ದಾರೆ.
ಕೇರಳದಲ್ಲಿ ಜನರು ಯುಡಿಎಫ್ ಪರವಾಗಿದ್ದು ಮೇ. 2ರಂದು ಫಲಿತಾಂಶ ಪ್ರಕಟವಾಗುವಾಗ ಯುಡಿಎಫ್ ಗೆದ್ದಿರುತ್ತದೆ ಎಂದು ಶಶಿ ತರೂರ್ ಆಶಾವಾದ ವ್ಯಕ್ತಪಡಿಸಿದ್ದಾರೆ.