ಗುಜರಾತ್ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಿರಿಯ ನಾಯಕ ಭೂಪೇಂದ್ರ ಪಟೇಲ್ (Bhupendra Patel)ರನ್ನು ಗುಜರಾತ್ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ನಿನ್ನೆ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ ನೀಡಿದಾಗಿನಿಂದ ಗುಜರಾತ್ನ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ದೊಡ್ಡ ಕುತೂಹಲ ಸೃಷ್ಟಿಸಿದ್ದ ವಿಷಯವಾಗಿತ್ತು. ಇಂದು ಬಿಎಲ್ಪಿ ಸಭೆ ಕೂಡ ನಡೆದಿತ್ತು. ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದರು. ಸಭೆ ಮುಕ್ತಾಯವಾಗಿದ್ದು, ಭೂಪೇಂದ್ರ ಪಾಟೀಲ್ರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಇವರ ಹೆಸರನ್ನು ವಿಜಯ್ ರೂಪಾನಿಯವರೇ ಸೂಚಿಸಿದ್ದಾರೆ ಎನ್ನಲಾಗಿದೆ.
ಭೂಪೇಂದ್ರ ಪಟೇಲ್ ಅವರು ಗುಜರಾತ್ನ ಘಾಟ್ಲೋಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ವಿರುದ್ಧ ಬರೋಬ್ಬರಿ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಭೂಪೇಂದ್ರ ಪಟೇಲ್ಗೂ ಮೊದಲು ಆನಂದಿಬೆನ್ ಪಟೇಲ್ (ಉತ್ತರಪ್ರದೇಶದ ಈಗಿನ ರಾಜ್ಯಪಾಲರು) ಅಭ್ಯರ್ಥಿಯಾಗಿದ್ದರು. ವಿಶೇಷವೆಂದರೆ ಆನಂದಿ ಬೆನ್ ಪಟೇಲ್ ಇದೇ ಕ್ಷೇತ್ರದಿಂದ ಗೆದ್ದು ಗುಜರಾತ್ ಮುಖ್ಯಮಂತ್ರಿಯಾಗಿದ್ದರು (2014-2016ರ ಅವಧಿ). ಇಂಜನಿಯರಿಂಗ್ ಓದಿದ್ದ ಭೂಪೇಂದ್ರ ಪಟೇಲ್ ಅವರು ಈ ಹಿಂದೆ ಅಹ್ಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (AUDA)ರಾಗಿ, ಅಮದ್ವಾಡ ಮುನ್ಸಿಪಲ್ ಕಾರ್ಪೋರೇಶನ್ ಸ್ಥಾಯಿ ಸಮಿತಿ (AMC) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಿನ್ನೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದು ಬಹು ಅಚ್ಚರಿ ಮೂಡಿಸಿತ್ತು. ಗುಜರಾತ್ ಚುನಾವಣೆ ಒಂದೇ ವರ್ಷದಲ್ಲಿದ್ದಾಗ ಮುಖ್ಯಮಂತ್ರಿ ಬದಲಾವಣೆ ಯಾಕೆ ಎಂಬ ಪ್ರಶ್ನೆಯನ್ನೂ ಮೂಡಿಸಿತ್ತು. ಹಾಗೇ, ಮುಖ್ಯಮಂತ್ರಿ ಹುದ್ದೆ ರೇಸ್ನಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಪ್ರಫುಲ್ ಪಟೇಲ್ ಸೇರಿ ಇನ್ನೂ ಹಲವು ಪ್ರಮುಖ ನಾಯಕರ ಹೆಸರುಗಳು ಕೇಳಿಬಂದಿದ್ದವು. ಅದರಲ್ಲಿ ಭೂಪೇಂದ್ರ ಪಟೇಲ್ ಹೆಸರೇನೂ ಅಷ್ಟೊಂದು ಪ್ರಾಮುಖ್ಯತೆ ಪಡೆದಿರಲಿಲ್ಲ. ಇದೀಗ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವ ಅವರು ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು
ನಂಜನಗೂಡು ದೇಗುಲ ತೆರವು ವಿಚಾರ: ದೇವಾಲಯ ಮರುನಿರ್ಮಾಣಕ್ಕೆ ಗ್ರಾಮಸ್ಥರ ತಯಾರಿ
Published On - 4:23 pm, Sun, 12 September 21