ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು
ಖ್ಯಾತ ಸೀರಿಯಲ್ ನಟ ರಮೇಶ್ ವಲಿಯಶಾಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ದಶಕಗಳಿಂದಲೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮಲಯಾಳಂ ಕಿರುತೆರೆಯ ಜನಪ್ರಿಯ ನಟ ರಮೇಶ್ ವಲಿಯಶಾಲ ಅವರು ನಿಧನರಾಗಿದ್ದಾರೆ. ಹಲವಾರು ಸೀರಿಯಲ್ಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೂಟಿಂಗ್ ಮುಗಿಸಿ ತಿರುವನಂತಪುರಂನಲ್ಲಿರುವ ತಮ್ಮ ಮನೆಗೆ ಬಂದಿದ್ದ ಅವರು ಶನಿವಾರ (ಸೆ.11) ನೇಣು ಹಾಕಿಕೊಂಡಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ರಮೇಶ್ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅವರು ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನಿರಬಹುದು ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದು, ತನಿಖೆ ಪೂರ್ಣಗೊಂಡ ನಂತರವೇ ಸತ್ಯಾಸತ್ಯತೆ ಹೊರಬರಬೇಕಿದೆ.
ಮೂಲಗಳ ಪ್ರಕಾರ, ರಮೇಶ್ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಕೊರೊನಾ ವೈರಸ್ನಿಂದ ಜಾರಿಯಾದ ಲಾಕ್ಡೌನ್ನಿಂದಾಗಿ ಅವರಿಗೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಆ ಕಾರಣದಿಂದಲೇ ಅವರು ನೇಣಿಗೆ ಶರಣಾಗಿರಬಹುದು ಎಂದು ಪೊಲೀಸ್ ಮೂಲಗಳು ಅಭಿಪ್ರಾಯಪಟ್ಟಿವೆ. ಐಪಿಸಿ ಸೆಕ್ಷನ್ 174ರ ಪ್ರಕಾರ (ಅಸಹಜ ಸಾವು) ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಮೇಶ್ ಅವರು ತಮ್ಮ ಎರಡನೇ ಪತ್ನಿ ಮತ್ತು ಮಗನ ಜೊತೆ ವಲಿಯಶಾಲದ ನಿವಾಸದಲ್ಲಿ ಇರುತ್ತಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಅವರ ಪತ್ನಿ ಮೊದಲು ನೋಡಿದರು. ನಂತರ ಅವರ ಶವನನ್ನು ಮೆಡಿಕಲ್ ಕಾಲೇಜ್ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.
‘ಪೌರ್ಣಮಿ ತಿಂಗಳ್’ ಧಾರಾವಾಹಿಯಲ್ಲಿ ರಮೇಶ್ ಅವರ ಕೊನೆಯದಾಗಿ ನಟಿಸಿದ್ದರು. ಅವರ ಸಾವಿನಿಂದ ಹಲವು ಅನುಮಾನ ಮೂಡಿದೆ. ರಮೇಶ್ ನಿಧನಕ್ಕೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಕಳೆದ 22 ವರ್ಷಗಳಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಹಾಗಾಗಿ ಅವರಿಗೆ ಆರ್ಥಿಕ ಸಂಕಷ್ಟ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
‘ಕೆಲವೇ ವರ್ಷಗಳ ಹಿಂದೆ ರಮೇಶ್ ಅವರ ಮೊದಲ ಪತ್ನಿ ಕ್ಯಾನ್ಸರ್ನಿಂದ ಮೃತರಾಗಿದ್ದರು. ಆ ಬಳಿಕ ಅವರಿಗೆ ಒಂಟಿತನ ಕಾಡಲು ಆರಂಭಿಸಿತ್ತು. ಹಾಗಿದ್ದರೂ ಕೂಡ ಆ ಕಷ್ಟಕಾಲವನ್ನು ಅವರು ಧೈರ್ಯದಿಂದ ಎದುರಿಸಿದ್ದರು. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿದ್ದರೆ ಆಗಲೇ ಮಾಡಿಕೊಳ್ಳಬೇಕಿತ್ತು. ರಮೇಶ್ ಅಂಥ ವ್ಯಕ್ತಿ ಆಗಿರಲಿಲ್ಲ’ ಎಂದು ಅವರ ಸ್ನೇಹಿತ ನಟ ಬಾಲಾಜಿ ಶರ್ಮಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಬಾಲಮಂದಿರದಲ್ಲಿ ಬಾಲಕಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ಕುಖ್ಯಾತ ರೌಡಿ ಅಶೋಕ್ ಪೈ ಪೊಲೀಸರ ವಶಕ್ಕೆ