
ತಿರುವನಂತಪುರಂ, ಡಿಸೆಂಬರ್ 26: ಕೇರಳದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಇದೀಗ ತಿರುವನಂತಪುರದ (Thiruvananthapuram) ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆಯಾಗಿದ್ದಾರೆ. ಇವರು ತಿರುವನಂತಪುರದ ಸ್ಥಳೀಯ ನಾಯಕರಾಗಿದ್ದು, ಬಿಜೆಪಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಚಿರಪರಿಚಿತರಾಗಿದ್ದಾರೆ.
ಮೇಯರ್ ಆಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, “ನಾವು ಒಟ್ಟಿಗೆ ಮುಂದುವರಿಯುತ್ತೇವೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಎಲ್ಲಾ 101 ವಾರ್ಡ್‌ಗಳಲ್ಲಿ ಅಭಿವೃದ್ಧಿಯನ್ನು ಜಾರಿಗೆ ತರಲಾಗುವುದು. ತಿರುವನಂತಪುರಂ ಅಭಿವೃದ್ಧಿ ಹೊಂದಿದ ನಗರವಾಗಿ ರೂಪಾಂತರಗೊಳ್ಳುತ್ತದೆ” ಎಂದು ಹೇಳಿದ್ದಾರೆ.
ಬಿಜೆಪಿ ಕೇರಳದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹಲವು ದಶಕಗಳಿಂದ ಪ್ರಯತ್ನಿಸುತ್ತಲೇ ಇದೆ. ಆದರೂ ಎಡಪಕ್ಷಗಳ ದರ್ಬಾರ್ ಜೋರಿರುವ ಕೇರಳದಲ್ಲಿ ಬಿಜೆಪಿಗೆ ಸ್ಥಾನ ಸಿಕ್ಕಿರಲಿಲ್ಲ. ಕೇರಳದಲ್ಲಿ ಇದುವರೆಗೆ ಒಬ್ಬ ಬಿಜೆಪಿ ಶಾಸಕ ಹಾಗೂ ಓರ್ವ ಸಂಸದನನ್ನು ಮಾತ್ರ ಹೊಂದಿದೆ. ಓ. ರಾಜಗೋಪಾಲ್ 2016ರಲ್ಲಿ ನೇಮಮ್ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದರು. ನಟ ಹಾಘೂ ರಾಜಕಾರಣಿ ಸುರೇಶ್ ಗೋಪಿ 2024ರಲ್ಲಿ ತ್ರಿಶೂರ್ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು.
ಇದನ್ನೂ ಓದಿ: ತಿರುವನಂತಪುರಂ ಕಾರ್ಪೊರೇಷನ್ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ 45 ವರ್ಷ ವಯಸ್ಸಿನ ವಿ.ವಿ ರಾಜೇಶ್ ಅವರು 51 ಮತಗಳನ್ನು ಪಡೆದರು. ಸಿಪಿಐಎಂನ ಆರ್‌ಪಿ ಶಿವಾಜಿ 29 ಸ್ಥಾನಗಳನ್ನು ಪಡೆದರು ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಕೆ.ಎಸ್. ಶಬರಿನಾಥನ್ 19 ಸ್ಥಾನಗಳನ್ನು ಪಡೆದರು. ಸ್ವತಂತ್ರ ಶಾಸಕರಾದ ಒಬ್ಬ ಕೌನ್ಸಿಲರ್ ಗೈರುಹಾಜರಾಗಿದ್ದರು. ಎರಡನೇ ಸ್ವತಂತ್ರ ಕೌನ್ಸಿಲರ್ ಪಿ. ರಾಧಾಕೃಷ್ಣನ್ ಅವರ ಬೆಂಬಲದಿಂದ ಬಿಜೆಪಿಯ ಗೆಲುವು ಸಾಧ್ಯವಾಯಿತು.
ಡಿಸೆಂಬರ್ 9ರ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆದ್ದಿತ್ತು. ಇದು ಪಕ್ಷಕ್ಕೆ ದಾಖಲೆಯ ಯಶಸ್ಸಾಗಿತ್ತು. ರಾಜೇಶ್ ಅವರ ಮೇಯರ್ ಸ್ಥಾನವು ಕೇರಳದ ರಾಜಕೀಯದಲ್ಲಿ ಬಿಜೆಪಿಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಭಾರಿ ಮುಖಭಂಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯದ್ದೇ ಪಾರುಪತ್ಯ
ಏಪ್ರಿಲ್ 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ 4 ತಿಂಗಳು ಬಾಕಿ ಇರುವಾಗ ಮೇಯರ್ ಆಗಿ ವಿ.ವಿ. ರಾಜೇಶ್ ಅವರ ನೇಮಕವು ಕೇರಳದ ಬಿಜೆಪಿಗೆ ಮಹತ್ವದ ಹೆಜ್ಜೆಯಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಹಲವು ಸುತ್ತಿನ ಚರ್ಚೆಗಳು ಮತ್ತು ಚರ್ಚೆಗಳ ನಂತರ ವಿ.ವಿ. ರಾಜೇಶ್ ಅವರ ಹೆಸರನ್ನು ಮೇಯರ್ ಅಭ್ಯರ್ಥಿಯಾಗಿ ನಿರ್ಧರಿಸಲಾಯಿತು. ರಾಜೇಶ್ ಪ್ರಸ್ತುತ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೊಡಂಗನೂರು ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. 2025ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅವರು 515 ಮತಗಳ ಅಂತರದಿಂದ ಸ್ಥಾನವನ್ನು ಗೆದ್ದಿದ್ದರು.
ವೃತ್ತಿಯಲ್ಲಿ ವಕೀಲರಾಗಿರುವ ರಾಜೇಶ್ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಕ್ಷದ ಹಿರಿಯ ನಾಯಕ. ಅವರು ಈ ಹಿಂದೆ ತಿರುವನಂತಪುರಂ ಜಿಲ್ಲಾ ಅಧ್ಯಕ್ಷರಾಗಿ ಮತ್ತು ಬಿಜೆಪಿ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ