ದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊರೊನಾ ಲಸಿಕೆ ಬಗ್ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬರೆದ ಪತ್ರಕ್ಕೆ ಪ್ರತಿಯಾಗಿ ಬಿಜೆಪಿ ಪಕ್ಷವು ದೀದಿಯ ಹಳೆಯ ಪತ್ರವೊಂದನ್ನು ಎತ್ತಿ ತೋರಿಸಿದೆ. ಮಮತಾ ಬ್ಯಾನರ್ಜಿ ಫೆಬ್ರವರಿ 24ರಂದು ಮೋದಿಗೆ ಬರೆದಿದ್ದ ಪತ್ರದಲ್ಲಿ ಕೊರೊನಾ ಲಸಿಕೆ ವಿಚಾರದಲ್ಲಿ ವಿಕೇಂದ್ರೀಕರಣ ಮಾಡಬೇಕು. ರಾಜ್ಯಗಳಿಗೆ ಲಸಿಕೆ ತರಿಸಿಕೊಳ್ಳುವ ಸ್ವಾತಂತ್ರ್ಯ ಕೊಟ್ಟರೆ ಅಗತ್ಯವಿದ್ದಷ್ಟು ಲಸಿಕೆ ಕೊಳ್ಳಬಹುದು ಎಂದು ತಿಳಿಸಿದ್ದರು. ಆದರೆ, ಈಗ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ತಿಳಿಸಿದ್ದಾರೆ.
ಪ್ರಸ್ತುತ ಭಾರತ ಸರ್ಕಾರವು ಕೊರೊನಾ ಲಸಿಕೆ ಕೊಳ್ಳುವ ವಿಚಾರದಲ್ಲಿ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಿದ್ದು, ಈ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಿದೆ. ಆದರೆ, ಮಮತಾ ಬ್ಯಾನರ್ಜಿಯಂತಹ ಮುಖ್ಯಮಂತ್ರಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಲ್ಲಿ ಅವರೇ ಪತ್ರ ಬರೆದು ವಿಕೇಂದ್ರಿಕರಣ ಮಾಡುವಂತೆ, ರಾಜ್ಯಗಳಿಗೆ ಜವಾಬ್ದಾರಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಈಗ ಆ ಜವಾಬ್ದಾರಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ನಿನ್ನೆ (ಮೇ 12) ಪ್ರಧಾನಿಗೆ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿ, ದೇಶದಲ್ಲಿ ಲಸಿಕೆ ವಿತರಣೆಯನ್ನು ವೇಗವಾಗಿ ಮಾಡಬೇಕು. ಜಾಗತಿಕ ಮಟ್ಟದ ಲಸಿಕೆ ಉತ್ಪಾದಕರಿಂದ ನೇರವಾಗಿ ಲಸಿಕೆ ತರಿಸಿಕೊಳ್ಳಿ. ವಿಶ್ವ ಮಟ್ಟದ ಲಸಿಕೆ ಉತ್ಪಾದಕರು ಭಾರತದಲ್ಲಿ ಲಸಿಕೆ ತಯಾರಿಸುವುದಾದರೆ ನಾವು ಜಾಗ ಕೊಡುತ್ತೇವೆ ಹಾಗೂ ನಮ್ಮ ಸರ್ಕಾರ ಅದಕ್ಕೆ ಸಹಕಾರ ನೀಡಲಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ:
ಕೇಂದ್ರ ಸಚಿವರು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ: ಮಮತಾ ಬ್ಯಾನರ್ಜಿ