
ನವದೆಹಲಿ, ನವೆಂಬರ್ 17: ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Elections) ಐತಿಹಾಸಿಕ ಗೆಲುವಿನ ಬಳಿಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರತದ ರಾಜ್ಯ ಶಾಸಕಾಂಗಗಳಲ್ಲಿ ತನ್ನ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸುವತ್ತ ಗಮನ ಹರಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಘೋಷಿಸಿದ್ದು, “ರಾಜ್ಯ ವಿಧಾನಸಭೆಗಳಲ್ಲಿ ಬಿಜೆಪಿಯ ಪ್ರಾತಿನಿಧ್ಯವು ಇದುವರೆಗಿನ ಅತ್ಯುನ್ನತ ಮಟ್ಟವನ್ನು ತಲುಪಿದೆ. ಇದು ಏರಿಕೆಯಾಗುತ್ತಲೇ ಇದೆ” ಎಂದು ಹೇಳಿದ್ದಾರೆ. ಹಾಗೇ, ಮುಂದಿನ 2 ವರ್ಷಗಳಲ್ಲಿ 1,800 ಬಿಜೆಪಿ ಶಾಸಕರನ್ನು ಹೊಂದುವ ಗುರಿಯಿದೆ ಎಂದು ಕೂಡ ಹೇಳಿದ್ದಾರೆ.
ಅಮಿತ್ ಮಾಳವೀಯ ಅವರು ಬಿಜೆಪಿಯ ಈ ಗುರಿಯ ಬಗ್ಗೆ ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಬಿಜೆಪಿ ದೇಶಾದ್ಯಂತ 1,800ಕ್ಕಿಂತ ಹೆಚ್ಚು ಶಾಸಕರನ್ನು ಹೊಂದುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷದ ಐತಿಹಾಸಿಕ ಉನ್ನತ ಹಂತದೊಂದಿಗೆ ಹೋಲಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರತ್ತ ಸ್ಕಾರ್ಫ್ ಬೀಸುತ್ತಾ ವಿಜಯದ ನಗು ಬೀರಿದ ಪ್ರಧಾನಿ ಮೋದಿ
“ಇದೇ ವೇಗದಲ್ಲಿ ಹೋದರೆ ಮುಂದಿನ ಎರಡು ವರ್ಷಗಳಲ್ಲಿ ಬಿಜೆಪಿ 1800 ಸ್ಥಾನಗಳ ಗಡಿಯನ್ನು ಆರಾಮವಾಗಿ ದಾಟುತ್ತದೆ” ಎಂದು ಅಮಿತ್ ಮಾಳವಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1985ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಅದೇ ಅನುಕಂಪವನ್ನು ಬಳಸಿಕೊಂಡು ಕಾಂಗ್ರೆಸ್ ಸುಮಾರು 2,018 ಶಾಸಕರ ಗರಿಷ್ಠ ಮಟ್ಟವನ್ನು ತಲುಪಿತ್ತು ಎಂದು ಅಮಿತ್ ಮಾಳವಿಯಾ ಉಲ್ಲೇಖಿಸಿದ್ದಾರೆ.
BJP is now at its highest-ever strength in State Assemblies and the momentum is only growing.
At this pace, the BJP will comfortably cross the 1800-seat mark in the next two years.For comparison, Congress touched its peak of around 2018 seats in 1985, riding on a massive… pic.twitter.com/6huvSTJc95
— Amit Malviya (@amitmalviya) November 17, 2025
1980ರ ದಶಕದಲ್ಲಿ ನಡೆದ ರಾಜಕೀಯ ಪರಿಸ್ಥಿತಿಗಳು ಅಧಿಕಾರವನ್ನು ಕ್ರೋಢೀಕರಿಸಲು ಮತ್ತು ಮತದಾರರನ್ನು ಓಲೈಸಲು ಕಾಂಗ್ರೆಸ್ಗೆ ಸಹಾಯ ಮಾಡಿತು. ಆದರೆ, ಬಿಜೆಪಿ ಹಂತ-ಹಂತವಾಗಿ ಮೆಟ್ಟಿಲುಗಳನ್ನು ಏರುತ್ತಾ ಈ ಹಂತಕ್ಕೆ ತಲುಪಿದೆ. ಬಿಜೆಪಿಗೆ ನಿರಂತರತೆಯಿದೆ. ಅದಕ್ಕೆ ಬಿಹಾರದ ಫಲಿತಾಂಶವೇ ಸಾಕ್ಷಿ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ಇದನ್ನೂ ಓದಿ: Bihar Election Results: ಬಿಹಾರದಲ್ಲಿ ತನ್ನದೇ ದಾಖಲೆ ಮುರಿದು ದೊಡ್ಡಣ್ಣನಾಗಿ ಹೊರಹೊಮ್ಮಿದ ಬಿಜೆಪಿ!
ಅಮಿತ್ ಮಾಳವೀಯ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2014ರಿಂದ ಬಿಜೆಪಿ ಶಾಸಕರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಬಿಜೆಪಿಯ ಶಾಸಕರ ಸಂಖ್ಯೆ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ವಿಕಸನಗೊಂಡಿದೆ. 2014ರಲ್ಲಿ 1,035 ಶಾಸಕರಿಂದ ಪ್ರಾರಂಭವಾಗಿ, 2015ರಲ್ಲಿ 997, 2016ರಲ್ಲಿ 1,053 ಮತ್ತು 2017ರಲ್ಲಿ 1,365ಕ್ಕೆ ಗಮನಾರ್ಹವಾಗಿ ಏರಿಕೆಯಾಗಿದೆ.
ನಂತರ ಈ ಸಂಖ್ಯೆಗಳು 2018ರಲ್ಲಿ 1,184, 2019ರಲ್ಲಿ 1,160 ಮತ್ತು 2020ರಲ್ಲಿ 1,207ಕ್ಕೆ ಏರಿಕೆಯಾಯಿತು. 2021ರಲ್ಲಿ 1,278 ಶಾಸಕರು, 2022ರಲ್ಲಿ 1,289, 2023ರಲ್ಲಿ 1,441, 2024ರಲ್ಲಿ 1,588 ಮತ್ತು ಅಂತಿಮವಾಗಿ 2025ರಲ್ಲಿ 1,654 ಶಾಸಕರ ಸಂಖ್ಯೆ ಏರಿಕೆಯಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ