ದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕರ್ಹಾಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಿಂದ ಅಖಿಲೇಶ್ ಯಾದವ್ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಒಬ್ಬರು ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಕರ್ಹಾಲ್ನಲ್ಲಿ ಫೆ.20ರಂದು ಮತದಾನ ನಡೆಯಲಿದ್ದು, ಬಿಜೆಪಿ ಕೇಂದ್ರ ಸಚಿವ ಎಸ್.ಪಿ.ಸಿಂಗ್ ಬಾಘೇಲ್ರಿಗೆ (Union Minister SP Singh Baghel) ಇಲ್ಲಿಂದ ಟಿಕೆಟ್ ನೀಡಿದೆ. ಅಂದರೆ ಅಖಿಲೇಶ್ ವಿರುದ್ಧ ಬಿಜೆಪಿಯಿಂದ ಕೇಂದ್ರ ಸಚಿವ ಎಸ್.ಪಿ.ಸಿಂಗ್ ಬಾಘೇಲ್ ಕಣಕ್ಕಿಳಿದಿದ್ದಾರೆ. ಅಂದಹಾಗೇ, ಈ ಬಾಘೇಲ್ ಅವರು ಆಗ್ರಾ ಕ್ಷೇತ್ರದ ಸಂಸದರಾಗಿದ್ದು, ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ರಾಜ್ಯ ಸಚಿವರಾಗಿದ್ದಾರೆ. ಬಾಘೇಲ್ ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ರ ವೈಯಕ್ತಿಕ ಭದ್ರತಾ ಅಧಿಕಾರಿ (PSO) ಆಗಿದ್ದರು. ಅವರೀಗ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ಧಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಬೆಳವಣಿಗೆ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕರ್ಹಾಲ್ನಲ್ಲಿ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಅಪರ್ಣಾ ಯಾದವ್ ಅವರನ್ನೇ ಕಣಕ್ಕಿಳಿಸಲಿದೆ ಎಂಬ ಮಾತುಗಳೂ ಕೇಳಿಬರುತ್ತಿತ್ತು. ಅಪರ್ಣಾ ಯಾದವ್ ಅವರು ಸಮಾಜವಾದಿ ಪಕ್ಷದಿಂದ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ. ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ (ಎರಡನೇ ಹೆಂಡತಿ ಪುತ್ರ) ಪ್ರತೀಕ್ ಯಾದವ್ ಪತ್ನಿಯಾಗಿರುವ ಇವರು, ಪ್ರಧಾನಿ ನರೇಂದ್ರ ಮೋದಿ ಕೆಲಸದಿಂದ ಪ್ರಭಾವಿತಳಾಗಿ ಬಿಜೆಪಿ ಸೇರಿದ್ದಾಗಿ ಹೇಳಿಕೊಂಡಿದ್ದರು. ಆದರೆ ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಬಿಜೆಪಿ, ಬಾಘೇಲ್ರಿಗೆ ಅವಕಾಶ ಕೊಟ್ಟಿದೆ. ಸೋಮವಾರ ಕರ್ಹಾಲ್ನಿಂದ ನಾಮಪತ್ರ ಸಲ್ಲಿಸಿದ ಬಾಘೇಲ್, ಇಂಥ ಆಶ್ಚರ್ಯಕರ ಅಂಶಗಳೇ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.
ಹಿಂದೆ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಬಾಘೇಲ್, 2021ರ ಜುಲೈನಲ್ಲಿ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಇವರು ‘ಗಡಾರಿಯಾ’ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಇವರು ಮೂಲತಃ ಔರಿಯಾ ಜಿಲ್ಲೆಯ ಭಟ್ಪುರ ಗ್ರಾಮಕ್ಕೆ ಸೇರಿದವರು. ಅಂದರೆ ಕುಟುಂಬದ ಹಿರಿಯರೆಲ್ಲ ಅಲ್ಲಿಯೇ ಇದ್ದಾರೆ. ಬಾಘೇಲ್ ಅವರು, ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದರು. ನಂತರ ಮುಲಾಯಂ ಸಿಂಗ್ ಯಾದವ್ ಭದ್ರತಾ ತಂಡದಲ್ಲಿ ಗುರುತಿಸಿಕೊಂಡರು. ಅದಾದ ನಂತರ 1989ರಲ್ಲಿ ಮೊದಲ ಬಾರಿಗೆ ಸಮಾಜವಾದಿ ಪಕ್ಷದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಅದರಲ್ಲಿ ಸೋತಿದ್ದರು. ಅದಾದ ನಂತರ 1998ರಲ್ಲಿ ಮೊದಲ ಸಲ ಚುನಾವಣೆ ಗೆದ್ದರು. ಸಮಾಜವಾದಿ ಪಕ್ಷದಿಂದ ಬಹುಜನ ಸಮಾಜ ಪಕ್ಷಕ್ಕೆ ಸೇರಿ, 2014ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಮಾಡದೇ ರೋಗಿಯನ್ನು ವೈದ್ಯರು ಸತಾಯಿಸುತ್ತಿರುವ ಆರೋಪ; ಜಿಮ್ಸ್ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ