ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೊರೊನಾ ವೈರಸ್ಗಿಂತಲೂ ಅಪಾಯಕಾರಿ ಎಂದು ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ. TMC ಪಕ್ಷ ಎಂಬ ವೈರಾಣುವನ್ನು ನಿವಾರಿಸಲು ಕೇಸರಿ ಪಕ್ಷವೇ ಲಸಿಕೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಟಿಎಂಸಿಯನ್ನು ನಿರ್ಮೂಲನೆ ಮಾಡಲಿದೆ ಎಂದು ಕುಲ್ಪಿ ಪ್ರದೇಶದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಪಕ್ಷದ ಕಾರ್ಯಕರ್ತರ ವಿರುದ್ಧ ಹಾಕಲಾಗಿರುವ ಸುಳ್ಳು ಕೇಸ್ಗಳನ್ನು ಹಿಂಪಡೆಯಲಾಗುವುದು. ಟಿಎಂಸಿ ಪಟಾಲಂ ಪ್ರತಿಪಕ್ಷಗಳಿಗೆ ಅನಾವಶ್ಯಕವಾಗಿ ನೀಡುತ್ತಿರುವ ತೊಂದರೆಗೆ ಪಾಠ ಕಲಿಸಲಾಗುವುದು ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಟಿಎಂಸಿ ಪಕ್ಷ ಕೊರೊನಾ ವೈರಸ್ಗಿಂತಲೂ ಅಪಾಯಕಾರಿ. ಅದನ್ನು ಮಣಿಸಲು ಬಿಜೆಪಿ ಎಂಬ ಲಸಿಕೆಯಿಂದಷ್ಟೇ ಸಾಧ್ಯ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಲಸಿಕೆ ಕೆಲಸ ಮಾಡಲಿದೆ ಎಂದು ಟಿಎಂಸಿ ನಾಯಕರ ಕಾಲೆಳೆದಿದ್ದಾರೆ. ಇನ್ನು ಬೆರಳೆಣಿಕೆ ದಿನವಷ್ಟೇ ಅಧಿಕಾರ ನಡೆಸುವುದು ಸಾಧ್ಯ ಎಂದು ಗೊತ್ತಿದ್ದರೂ ಟಿಎಂಸಿ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ವಿರುದ್ಧ ಗೂಂಡಾಗಿರಿ ನಡೆಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಅವರಿಗೆ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂ ಕಿಸಾನ್ ಸಮ್ಮಾನ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳನ್ನು ಪ.ಬಂಗಾಳದಲ್ಲಿ ಅಳವಡಿಸಲು ಟಿಎಂಸಿ ಅವಕಾಶವೇ ನೀಡಿಲ್ಲ. ಅದೊಂದು ಪ್ರಜಾಪ್ರಭುತ್ವ ವಿರೋಧಿ ಪಕ್ಷ. ಕಡೇಪಕ್ಷ ಬಿಜೆಪಿಯ ಆಡಳಿತ ವೈಖರಿಯನ್ನಾದರೂ ನೋಡಿ ಟಿಎಂಸಿ ಪಾಠ ಕಲಿಯಬೇಕು ಎಂದು ಕಿಚಾಯಿಸಿದ್ದಾರೆ.
ಟಿಎಂಸಿ ಕೊರೊನಾಕ್ಕಿಂತಲೂ ಅಪಾಯಕಾರಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ, ಇಂತಹ ಕೀಳುಮಟ್ಟದ ಹೇಳಿಕೆಗೆ ನಾವು ಪ್ರತಿಕ್ರಿಯತಿಸುವುದಿಲ್ಲ. ಇದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುವ ಹೇಳಿಕೆ ಎನ್ನುವುದು ಸ್ಪಷ್ಟ. ಇದಕ್ಕೆಲ್ಲಾ ಜನರೇ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಪಶ್ಚಿಮ ಬಂಗಾಳ: ಅಮಿತ್ ಶಾ ಸಮ್ಮುಖದಲ್ಲಿ ಸುವೇಂದು ಅಧಿಕಾರಿ, 11 ಶಾಸಕರು, 1 ಎಂಪಿ ಬಿಜೆಪಿ ಸೇರ್ಪಡೆ
Published On - 10:04 pm, Wed, 23 December 20