2021 ವಿಧಾನಸಭೆ ಚುನಾವಣೆವರೆಗೆ ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಶಾ
ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿ ತಿಂಗಳು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿ ತಿಂಗಳು ಅಲ್ಲಿಗೆ ಭೇಟಿ ನೀಡಿ ಒಂದು ವಾರ ಅಲ್ಲಿ ಕಳೆಯಲಿದ್ದಾರೆ. ಜನವರಿ 12ನೇ ತಾರೀಖಿನಂದು ಸಚಿವರು ಮತ್ತೆ ಬಂಗಾಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಬಿಜೆಪಿ ಮೂಲಗಳು ಹೇಳಿವೆ.
ಚುನಾವಣೆ ಮುಗಿಯುವವರೆಗೆ ಶಾ ಅವರು ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಆದಾಗ್ಯೂ, ಶಾ ಭೇಟಿ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ. ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿ ಕನಿಷ್ಠ ಒಂದು ವಾರ ಇದ್ದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಮನವಿ ಮಾಡಿತ್ತು.
ಶಾ ಅವರು ಪ್ರತಿ ತಿಂಗಳು ಇಲ್ಲಿ ಬಂದು ಕನಿಷ್ಠ ಒಂದು ವಾರ ಇರಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದರು. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಯಲ್ಲಿ 200 ಸೀಟುಗಳನ್ನು ಗೆಲ್ಲಬೇಕು ಎಂಬುದು ರಾಜ್ಯ ಬಿಜೆಪಿಯ ಗುರಿ.
ಟಿಎಂಸಿ ಮುಳುಗುತ್ತಿರುವ ಹಡಗು, ಮಮತಾ ಬ್ಯಾನರ್ಜಿ ಯುಗ ಶೀಘ್ರವೇ ಅಂತ್ಯ: ಅಮಿತ್ ಶಾ