ಕೃಷಿ ಕಾಯ್ದೆ ಹಿಂಪಡೆಯುವಂತೆ ರಕ್ತದಲ್ಲಿ ಮನವಿ ಪತ್ರ ಬರೆದ ರೈತರು
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ನ ಚಳವಳಿ ನಿರತ ರೈತರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಲು ಹಲವು ವಿಧಾನಗಳನ್ನು ಪಂಜಾಬ್ ರೈತರು ಅನುಸರಿಸುತ್ತಿದ್ದಾರೆ. ಪಂಜಾಬ್ನ ಲುಧಿಯಾನಾ ಮೂಲದ ಭಾಯ್ ಘನಿಯಾ ಜಿ ಸೇವಾ ಸಮಾಜ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ರೈತರು ರಕ್ತದಾನ ಮಾಡಿದ್ದರು. ರಕ್ತದಾನದ ನಂತರ, ರೈತರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
‘ಶುಭೋದಯ ಮಾನ್ಯ ನರೇಂದ್ರ ಮೋದಿಯವರೇ, ಈ ಪತ್ರವನ್ನು ನಮ್ಮದೇ ರಕ್ತದಲ್ಲಿ ಬರೆಯುತ್ತಿದ್ದೇವೆ. ನಮ್ಮ ಮತಗಳಿಂದ ನೀವು ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದೀರಿ.. ಆದರೆ ಹೊಸ ಕೃಷಿ ಕಾಯ್ದೆಗಳನ್ನು ಅಂಗೀಕರಿಸುವ ಮೂಲಕ ನೀವು ರೈತ ಸಮುದಾಯಕ್ಕೆ ದ್ರೋಹವೆಸಗಿದ್ದೀರಿ.. ದಯವಿಟ್ಟು ಈ ಕಾಯ್ದೆಗಳನ್ನು ಮರಳಿ ಪಡೆಯುವಂತೆ ನಾವು ಮನವಿ ಮಾಡುತ್ತೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅಲ್ಲದೇ, ಕೆಲ ರೈತರು ‘ಕಪ್ಪು ಕಾಯ್ದೆಗಳನ್ನು ಹಿಂಪಡೆಯಿರಿ’ ಎಂದೂ ಪತ್ರದಲ್ಲಿ ಬರೆದಿದ್ದಾರೆ. ಪತ್ರಗಳನ್ನು ಅಂಚೆಯ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸುವುದಾಗಿ ರೈತ ನಾಯಕ ತರುಣ್ಜೀತ್ ಸಿಂಗ್ ತಿಳಿಸಿದ್ದಾರೆ.
Delhi Chalo ರೈತ ಸಮುದಾಯದಲ್ಲಿ ಒಡಕು ಮೂಡಿಸಿದ ನೂತನ ಕೃಷಿ ಕಾಯ್ದೆಗಳು