Delhi Chalo ರೈತ ಸಮುದಾಯದಲ್ಲಿ ಒಡಕು ಮೂಡಿಸಿದ ನೂತನ ಕೃಷಿ ಕಾಯ್ದೆಗಳು
ದೇಶದ ಕೆಲ ಭಾಗದ ರೈತರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಸೇರುತ್ತಿದ್ದರೆ, ಇನ್ನು ಕೆಲವು ಭಾಗದ ರೈತರು ಕಾಯ್ದೆ ಬೆಂಬಲಿಸಲು ರಾಜಧಾನಿಯತ್ತ ಹೊರಟಿದ್ದಾರೆ. ಪರ-ವಿರೋಧ ಸಹಿ ಸಂಗ್ರಹಿಸಿ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸುವ ಪ್ರಕ್ರಿಯಿಯೂ ಸಾಗುತ್ತಿದೆ.
ದೆಹಲಿ: ಪಂಜಾಬ್ ರೈತರ ಚಳವಳಿಗೆ ತಿಂಗಳು ಭರ್ತಿಯಾಗುತ್ತಿದೆ. ದೇಶದ ರೈತ ಸಮುದಾಯ ಮತ್ತು ಒಕ್ಕೂಟಗಳ ನಡುವೆ ನೂತನ ಕೃಷಿ ಕಾಯ್ದೆ ಒಡಕು ಮೂಡಿಸಿರುವುದು ನಿಚ್ಚಳವಾಗುತ್ತಿದೆ. ಕೃಷಿ ಕಾಯ್ದೆ ವಿರೋಧಿಸಿ ಮಹಾರಾಷ್ಟ್ರದ ನಾಸಿಕ್ನಿಂದ ಹೊರಟ ಸಾವಿರಾರು ರೈತರು ಇಂದು ದೆಹಲಿಯಲ್ಲಿ ಚಳವಳಿ ಸೇರಲಿದ್ದಾರೆ.
ಇನ್ನು, ಕೃಷಿ ಕಾಯ್ದೆ ಬೆಂಬಲಿಸಿ ಉತ್ತರ ಪ್ರದೇಶ ಕಿಸಾನ್ ಸೇನಾ ಸಂಘಟನೆಯ 20 ಸಾವಿರ ರೈತರು ರಾಷ್ಟ್ರ ರಾಜಧಾನಿಯತ್ತ ಮೆರವಣಿಗೆ ಹೊರಟಿದ್ದಾರೆ. ಆಗ್ರಾ, ಮಥುರಾ, ಮೀರತ್, ಹಥ್ರಾಸ್, ಫಿರೋಜಾಬಾದ್ ಮತ್ತು ಮುಜಾಫರ್ನಗರಗಳ ರೈತರನ್ನು ಒಗ್ಗೂಡಿಸಿಕೊಂಡು ಕಿಸಾನ್ ಸೇನಾ ದೆಹಲಿತ್ತ ತೆರಳಲಿದೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ವಿಜಯ್ ಚೌಕದಿಂದ ರಾಷ್ಟ್ರಪತಿ ಭವನಕ್ಕೆ ಜಾಥಾ ಕೈಗೊಳ್ಳಲಿದೆ. ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ರನ್ನು ಭೇಟಿಯಾಗಿ ಕೃಷಿ ಕಾಯ್ದೆ ವಿರೋಧಿಸಿ ಸಂಗ್ರಹಿಸಲಾದ 2 ಕೋಟಿ ಸಹಿಗಳನ್ನು ಹಸ್ತಾಂತರಿಸಲಿದೆ.
ಗ್ರಾಮೀಣ ಸರ್ಕಾರೇತರ ಸಂಸ್ಥೆಗಳ ಒಕ್ಕೂಟಗಳು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ನೂತನ ಕೃಷಿ ಕಾಯ್ದೆಗಳ ಪರ ಸಂಗ್ರಹಿಸಲಾದ 3.13,363 ಸಹಿಗಳನ್ನು ಹಸ್ತಾಂತರಿಸಿವೆ. 1 ಲಕ್ಷ ಗ್ರಾಮಗಳ ರೈತರಿಂದ ಈ ಸಹಿ ಸಂಗ್ರಹಿಸಲಾಗಿದೆ.
6 ರಾಜ್ಯದ ರೈತರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ದೇಶದ 6 ರಾಜ್ಯಗಳ ರೈತರ ಜೊತೆ ಪ್ರಧಾನಿ ನರೇಂದ್ರ ಮೋದಿ ನಾಳೆ ವರ್ಚುವಲ್ ಸಂವಾದ ನಡೆಸಲಿದ್ದಾರೆ. ಇದೇ ವೇಳೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಂಬತ್ತು ಕೋಟಿ ರೈತರ ಖಾತೆಗೆ ಒಟ್ಟು 18,000 ಕೋಟಿ ಹಣವನ್ನು ಪ್ರಧಾನಿ ವರ್ಗಾಯಿಸಲಿದ್ದಾರೆ.
ವೆಬಿನಾರ್ ಆಯೋಜಿಸಿದ ರೈತ ಒಕ್ಕೂಟಗಳು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ಕಾರಣಗಳನ್ನು ನೇರವಾಗಿ ವಿವರಿಸಲು ದೆಹಲಿ ಚಲೋ ನಿರತ ರೈತ ಮುಖಂಡರು ವೆಬಿನಾರ್ ಆಯೋಜಿಸಿದ್ದಾರೆ. ವೆಬಿನಾರ್ನಲ್ಲಿ ನೂತನ ಕೃಷಿ ಕಾಯ್ದೆಗಳಿಂದ ಉಂಟಾಗಲಿರುವ ಹಾನಿಗಳನ್ನು ವಿವರಿಸಲಿದ್ದಾರೆ. ಕೃಷಿ ಕಾಯ್ದೆ ಬೆಂಬಲಿಸಿರುವ ನಟಿ ಕಂಗನಾ ರನೌತ್, ಮುಖೇಶ್ ಖನ್ನಾ ಮತ್ತು ಪಾಯಲ್ ರೋಹ್ಟಗಿ ಅವರನ್ನೂ ವೆಬಿನಾರ್ಗೆ ಆಹ್ವಾನಿಸಲಾಗಿದೆ.