ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರ ಪರ ನಿಂತ ಬಿಜೆಪಿ ಸಂಸದ; ಅನ್ನದಾತರನ್ನು ಅರ್ಥ ಮಾಡಿಕೊಳ್ಳಲು ಸಲಹೆ
ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಹಲವು ಸಮಾವೇಶಗಳನ್ನು ನಡೆಸಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್ನ ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi), ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ಪ್ರತಿಭಟನೆ (Farmers Protest) ನಡೆಸುತ್ತಿರುವ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಕಳೆದ 8-9 ತಿಂಗಳಿಂದಲೂ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದು, ಕಾಯ್ದೆಗಳನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸುತ್ತಿದ್ದಾರೆ. ಹಾಗೇ, ಇಂದು ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಬೃಹತ್ ಸಭೆ ನಡೆಸಿ, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಚಳವಳಿಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಇದೇ ಹೊತ್ತಲ್ಲಿ ಪಿಲಿಭಿತ್ ಸಂಸದ ವರುಣ್ ಗಾಂಧಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ರೈತರ ಪರ ಪೋಸ್ಟ್ ಹಾಕಿದ್ದಾರೆ. ಕಿಸಾನ್ ಮಹಾಪಂಚಾಯತ್ನ್ನು ಸಮರ್ಥಿಸಿದ ಅವರು, ರೈತರೊಂದಿಗೆ ಗೌರವಯುತವಾಗಿ ಮತ್ತೊಮ್ಮೆ ಮಾತುಕತೆ ನಡೆಸಬೇಕು ಎಂದು ತಮ್ಮದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದಾರೆ. ರೈತರ ಇಂದಿನ ಸಭೆಯ ವಿಡಿಯೋ ಶೇರ್ ಮಾಡಿಕೊಂಡ ವರುಣ್ ಗಾಂಧಿ, ಇಂದು ಮುಜಾಫರ್ನಗರದಲ್ಲಿ ಲಕ್ಷಾಂತರ ರೈತರು ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೂ ನಮ್ಮಂತೆಯೇ ಮಾಂಸ-ರಕ್ತ ಹೊಂದಿರುವ ಮನುಷ್ಯರು. ಅವರೊಂದಿಗೆ ನಾವು ಗೌರವಯುತವಾಗಿ ಮತ್ತೆ ಮಾತುಕತೆ ಪ್ರಾರಂಭಿಸಬೇಕಾದ ಅಗತ್ಯತೆ ಇದೆ. ರೈತರ ನೋವು, ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರ ತಳಮಟ್ಟದ ಸಮಸ್ಯೆಯನ್ನು ಅರಿಯಬೇಕು ಎಂದು ಹೇಳಿದ್ದಾರೆ.
Lakhs of farmers have gathered in protest today, in Muzaffarnagar. They are our own flesh and blood. We need to start re-engaging with them in a respectful manner: understand their pain, their point of view and work with them in reaching common ground. pic.twitter.com/ZIgg1CGZLn
— Varun Gandhi (@varungandhi80) September 5, 2021
ಮುಜಾಫರ್ನಗರದಲ್ಲಿ ಬಿಗಿ ಭದ್ರತೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಹಲವು ಸಮಾವೇಶಗಳನ್ನು ನಡೆಸಿರುವ ರೈತ ಸಂಘಟನೆಗಳು ಇಂದು ಮುಜಾಫರ್ನಗರದಲ್ಲಿ ಮಹಾಪಂಚಾಯತ್ ನಡೆಸಿ ಕೇಂದ್ರದ ಗಮನ ಸೆಳೆದಿವೆ. ಆಗಸ್ಟ್ 28ರಂದು ರೈತರು ಹರ್ಯಾಣದಲ್ಲಿ ಪ್ರತಿಭಟನೆ ನಡೆಸಿದಾಗ ಲಾಠಿ ಚಾರ್ಜ್ ಆಗಿತ್ತು. ಇಂದು ಮತ್ತೆ ಮುಜಾಫರ್ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ‘ನಾನು ತಾಲಿಬಾನಿಗಳಿಗೆ ಶರಣಾಗುವುದಿಲ್ಲ..ಅಂಥ ಪರಿಸ್ಥಿತಿ ಬಂದರೆ ನನ್ನ ತಲೆಗೆ ಎರಡು ಬಾರಿ ಗುಂಡು ಹೊಡಿ‘
ಬಾಗಲಕೋಟೆಯಲ್ಲಿ ಎಗ್ರೈಸ್ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ
Published On - 6:20 pm, Sun, 5 September 21